Sahyadri Arts College ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಹೆಣ್ಣಿನ ಆದರ್ಶಕರಣ ಮಾದರಿಗಳು ಭಿನ್ನವಾಗಿವೆ. ಯಾವ ಕ್ಷೇತ್ರದಲ್ಲಿ ಹೆಣ್ಣಿನ ಸಾಧನೆ ಅಸಾಧ್ಯ ಎಂದು ಭಾವಿಸಲಾಗಿತ್ತೋ ಅಂತ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಹಾಲಮ್ಮ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆ ವರ್ತಮಾನದ ತಲ್ಲಣಗಳ ಕುರಿತು ಮಾತನಾಡಿ, ಎಲ್ಲ ಕಡೆಯಲ್ಲೂ ಇಂದು ಮಹಿಳೆಯರು ಸಶಕ್ತವಾಗಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸ್ವಾಸ್ತ್ಯ ಸಮಾಜ ನಿರ್ಮಿತಿಯು ಗಂಡು ಹೆಣ್ಣು ಸಹವರ್ತಿಯಾಗಿ ನಡೆದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮನೆಯ ಒಳಗೆ ಹೊರಗೆ ದುಡಿಯುತ್ತಿರುವ ಅನೇಕ ಮಹಿಳೆಯರು ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದಾರೆ. ವೃತ್ತಿ ಬದುಕಿನಷ್ಟೆ ಮುಖ್ಯವಾದದ್ದು ಕೌಟುಂಬಿಕ ಬದುಕು. ಅದನ್ನು ಕಾಪಿಟ್ಟುಕೊಳ್ಳಬೇಕಾದ ಹೊಣೆಯನ್ನು ಮಹಿಳೆ ಮತ್ತು ಪುರುಷರು ಸಮಭಾವದಿಂದ ನಿರ್ವಹಿಸಬೇಕು ಎಂದರು.
ಸ್ಕೌಟ್ ಜಿಲ್ಲಾ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಮಹಿಳೆಯರು ಭಯವಿಲ್ಲದೆ ಓಡಾಡುವ ವಾತಾವರಣ ನಿರ್ಮಾಣವಾಗಬೇಕು. ಹೆಣ್ಣಿನ ಕೊಲೆ, ಸುಲಿಗೆ, ಅತ್ಯಾಚಾರದಂತ ಘಟನೆಗಳು ನಡೆದಾಗ ಆಕೆಯನ್ನೆ ದೂಷಿಸಿ ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಬದಲು ನೀಚ ಕೃತ್ಯಕ್ಕೆ ಕೈ ಹಾಕಿದ ದುರುಳರನ್ನು ಹಿಡಿದು ಕಠಿಣ ಶಿಕ್ಷೆ ನೀಡುವುದರ ಮೂಲಕ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
Sahyadri Arts College ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೈಡ್ ಜಿಲ್ಲಾ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಎಲ್ಲರೂ ಸೂಕ್ತ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು. ಮಹಿಳೆಯರು ಉನ್ನತ ಸ್ಥಾನ ತಲುಪುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಆಯುಕ್ತರಾದ ಭಾರತಿ ಡಯಾಸ್. ವೈ ಆರ್ ವೀರೇಶಪ್ಪ , ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಮಲ್ಲಿಕಾರ್ಜುನ್ ಕಾನೂರ್, ಚಂದ್ರಶೇಖರ್, ರಾಜೇಶ್ ಅವಲಕ್ಕಿ ಉಪಸ್ಥಿತರಿದ್ದರು.