Death News ಕುಚ್ಚಂಗಿ ಕೆರೆಯಲ್ಲಿ ಸಿಕ್ಕ ಕಾರಿನಲ್ಲಿ ಮೂರು ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವಿದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತುಮಕೂರಿನ ಕುಚ್ಚಂಗಿ ಕೆರೆ ಸಮೀಪ ಸುಟ್ಟುಕರಕಲಾದ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿತ್ತು. ಕಾರಿನಲ್ಲಿ ಮೂರು ಮೃತದೇಹಗಳೂ ಕೂಡ ಪತ್ತೆಯಾಗಿದ್ದವು. ಮೃತರನ್ನು ಇಸಾಕ್ (56), ಸಾಹುಲ್ (45), ಇಮ್ಮಿಯಾಜ್ (34) ಎಂದು ಗುರ್ತಿಸಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಮೂವರನ್ನು ಚಿನ್ನದಾಸೆ ತೋರಿಸಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದ್ದು, ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಆರೋಪಿಗಳು ಮೂವರನ್ನು ಕರೆಸಿಕೊಂಡಿದ್ದಾರೆ.
ಚಿನ್ನದ ಆಸೆಗೆ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಿಂದ ತುಮಕೂರಿಗೆ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮೃತ ಇಸಾಕ್ ಹಾಗೂ ಆತನ ಸ್ನೇಹಿತರಾದ ಸಾಹುಲ್ ಹಾಗೂ ಇಮ್ಮಿಯಾಜ್ ಬಂದಿದ್ದಾರೆ. ಆರೋಪಿಗಳು ಮೃತರ ನಡುವೆ 1ಕೋಟಿ ರೂ ನಷ್ಟು ವಹಿವಾಟು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದರಂತೆ ಒಪ್ಪಂದ ಮಾಡಿಕೊಳ್ಳಲು ಗುರುವಾರ ರಾತ್ರಿಯೇ ಮೃತರ ಆರೋಪಿಗಳನ್ನು ಭೇಟಿ ಮಾಡಲು ಬಂದಿದ್ದಾರೆ. ಈ ವೇಳೆ ಹಂತಕರು ನಕಲಿ ಚಿನ್ನ ತೋರಿಸಿ, ಹಣ ದೋಚಲು ಮುಂದಾಗಿದ್ದರು. ಈ ಮೂವರನ್ನು ಜನರಿಲ್ಲದ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದಾರೆ. ನಂತರ ಅದೇ ಕಾರಿನ ಡಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಮತ್ತೊಬ್ಬನ ಮೃತದೇಹ ಇಟ್ಟು ಕುಚ್ಚಂಗಿ ಕೆರೆಯ ಬಳಿ ತಂದಿರಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಶವ ಸಹಿತ ಸುಟ್ಟು ಹೋದರೆ ಗುರುತು ಪತ್ತೆ ಸಾಧ್ಯವಾಗದು ಎಂಬ ಲೆಕ್ಕ ಹಾಕಿದ್ದರು.
Death News ಆದರೆ ಕಾರಿನ ನಂಬರ್ ಆಧರಿಸಿ ಮಾಲೀಕನನ್ನು ಪೊಲೀಸರು ಸಂಪರ್ಕಸಿದಾಗ, 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ತಿಳಿಸಿದ್ದ. ಇಸಾಕ್ ವಿಷಯ ತಿಳಿಯುತ್ತಲೇ ಮೂವರ ಗುರುತು ಪತ್ತೆಯಾಗಿತ್ತು. ಸದ್ಯ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿ ಸ್ವಾಮಿ ಸೇರಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ತಾಲೂಕಿನ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.