Ripponpet ಕೇಂದ್ರಿತ ಹುಂಚ ಮತ್ತು ಕೆರೆಹಳ್ಳಿ ಹೋಬಳಿಯ 10 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫೆಬ್ರವರಿ ಅಂತ್ಯದಲ್ಲಿಯೇ ಜಲಕ್ಷಾಮ ಭೀತಿ ಗೋಚರಿಸುತ್ತಿವೆ.
ಮಲೆನಾಡಿನ ಹೃದಯ ಭಾಗದಲ್ಲಿರುವ ಕುಮದ್ವತಿ ಹಾಗೂ ಶರ್ಮಿಣ್ಯಾವತಿ
ಬರಿದಾದ ನದಿ ತಟಗಳು, ಬತ್ತಿದ ಕೆರೆ-ಕಟ್ಟೆ, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳು ಇದನ್ನು ಸಾಕ್ಷಿಕರಿಸಿವೆ.
ಸಾಂಪ್ರದಾಯಿಕ ಹವಾಮಾನಕ್ಕೆ ವ್ಯತಿರಿಕ್ತವಾದ ಹವಾಮಾನ ವೈಪರಿತ್ಯದಿಂದ ಸಕಾಲಿಕದಲ್ಲಿ ವಾಡಿಕೆ ಮಳೆಯಾಗದೆ ಈ ಹೋಬಳಿಗಳ ಜನ ಸಮುದಾಯ ಪರಿಸರದ ಸವಾಲಿಗೆ ತಲೆ ಭಾಗುವಂತಾಗಿದೆ.
ಕಳೆದ ಮುಂಗಾರಿನಲ್ಲಿ ಸರಾಸರಿ ಕೇವಲ 2933 ಮಿ.ಮೀ. ನಷ್ಟು ಪ್ರಮಾಣದ ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ. 32ರಷ್ಟು ಮಳೆ ಕೊರತೆ ಕಂಡಿದೆ. ನಿರೀಕ್ಷಿತ ಪ್ರಮಾಣದ ಹಿಂಗಾರು ಮಳೆ ಕೈ ಕೊಟ್ಟಿರುವುದೇ ಬರದ ಛಾಯೆಗೆ ಪ್ರಮುಖ ಕಾರಣವಾಗಿದ್ದು, ಈ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳ ಮೇಲೆಯೂ ತೀವ್ರ ತರಹದ ಪರಿಣಾಮ ಬೀರಿದೆ.
ಜನ ಜಾನುವಾರುಗಳಿಗೆ ಮನೆ ಬಳಕೆಗೆ ಶುದ್ಧ ಕುಡಿಯುವ ನೀರು ಗ್ರಾಮೀಣ ಭಾಗದಲ್ಲಿ ಇದೀಗ ಕೇವಲ ಮರೀಚಿಕೆಯಾಗಿದ್ದು ಕ್ಷೀಣಿಸುತ್ತಿರುವ ಅಂತರ್ಜಲ ನಿಕ್ಷೇಪ ರೈತರ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆಗಳ ಕುಂಠಿತಕ್ಕೂ ಕಾರಣವಾಗಿದೆ.
ರೈತಾಪಿ ವರ್ಗದವರು 600-800 ಅಡಿಗಳ ಆಳಕ್ಕೆ ಕೊರೆದ ಕೊಳವೆ ಬಾವಿಗಳಲ್ಲೂ ಹನಿ ನೀರಿಗೂ ಪರಿತಪಿಸುವಂತಾಗಿದೆ.
ಅರಸಾಳು, ಹೆದ್ದಾರಿಪುರ, ಬೆಳ್ಳೂರು ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಹೊಗಳಿಕೆಮ್ಮನ ಕೆರೆ ನೀರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೃಷಿ ಜಮೀನಿಗೆ ಆಧಾರವಾಗಿದೆ. ಇದೇ ನೀರನ್ನು ಕಾನುಗೋಡು ಗ್ರಾಮದ 6-7 ಕುಟುಂಬದವರು ನಿತ್ಯ ಮನೆ ಬಳಕೆಗೂ ಉಪಯೋಗಿಸುತ್ತಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ಭಾಗದಲ್ಲಿ ಇಳೆಯನ್ನು ತಂಪಾಗಿಸುವ ಮಳೆ ಬಾರದೆ ಇದ್ದಲ್ಲಿ ಮಲೆನಾಡ ಈ ಭಾಗದಲ್ಲಿ ಬರದ ಕಾರ್ಮೋಡ ಕವಿಯಲಿದೆ. ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ಎರಡೂ ಹೋಬಳಿ ವ್ಯಾಪ್ತಿಯ 10 ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶದಂತೆ ಬರ ನಿರ್ವಹಣೆಯ ಕುರಿತು ಸನ್ನದ್ಧರಾಗಿರುವುದಾಗಿ ಹೇಳಿದ್ದಾರೆ.
Ripponpet ರಿಪ್ಪನ್‌ಪೇಟೆ ಗ್ರಾಮದ ವ್ಯಾಪ್ತಿಯ ಎಲ್ಲಾ ಬಡಾವಣೆಯ ನಿವಾಸಿಗಳಿಗೆ ನೀರು ಒದಗಿಸಲು 7-8 ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ದಿನ ಬಿಟ್ಟು ದಿನ ನೀರು ಒದಗಿಸಲಾಗುತ್ತಿದೆ. ಜೆಜೆಎಂ ಕಾಮಗಾರಿ ಸಹ ಕುಂಟುತ್ತಾ ಸಾಗಿದೆ. ಕೆಲವು ಬಡಾವಣೆಗಳಲ್ಲಿ ಹನಿ ನೀರಿಗೂ ತತ್ವಾರ ಉಂಟಾಗಿದೆ. ಆದರೂ ಜನತೆಗೆ ನೀರು ಪೂರೈಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.