International Women’s Day ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಶಿವಮೊಗ್ಗದ ಸ್ವೇಧ ಸಂಸ್ಥೆಯು ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಮನೋವೈದ್ಯೆ ಡಾ. ಪವಿತ್ರ.ಕೆ.ಎಸ್. ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ವತಿಯಿಂದ ಎಂಎಸ್‌ಎಂಇ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉದ್ಯಮದಲ್ಲಿ ಮಹಿಳೆಯರು ಯಶಸ್ಸು ಸಾಧಿಸುವುದು ಅಷ್ಟೊಂದು ಸುಲಭವಲ್ಲ. ಅನೇಕ ಒತ್ತಡ, ಹತಾಶೆಯ ನಡುವೆಯು ಉದ್ಯಮ ನಡೆಸಲು ಕಷ್ಟಕರ ಎನ್ನುವ ಸನ್ನಿವೇಶ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಧೃಢ ಮನೋಭಾವ ಹಾಗೂ ಸಕರಾತ್ಮಕ ನಿರ್ಧಾರಗಳಿಂದ ಮುನ್ನಡೆಸಬೇಕು. ಭವಿಷ್ಯದಲ್ಲಿ ಉತ್ತಮ ಬದುಕು ನಮ್ಮದಾಗುತ್ತದೆ ಎನ್ನುವ ಪರಿಕಲ್ಪನೆ ಹೊಂದಿರಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಮಹಿಳೆಯಲ್ಲೂ ಅಸಾಧಾರಣ ಶಕ್ತಿ ಸಾಮಾರ್ಥ್ಯ ಇದೆ ಎನ್ನುವುದನ್ನು ಮನಗಾಣಬೇಕು. ಹಂತ ಹಂತವಾಗಿ ಉದ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು. ಸ್ವೇಧ ಸಂಸ್ಥೆಯು ಮಹಿಳಾ ಉದ್ಯಮಿಗಳಿಗೆ ಪೂರಕ ಆಗಿರುವ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಗುರಿಯ ಕಡೆಗೆ ನಿಮ್ಮ ಪ್ರಯಾಣ ಸದಾ ಇರಬೇಕು ಎಂದರು.
ಎಂಎಸ್‌ಎಂಇ ಇಲಾಖೆಯ ಉಪನಿರ್ದೇಶಕ ಆರ್.ಗೋಪಿನಾಥರಾವ್ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಶಕ್ತಿ ತುಂಬಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರಗಳು ಸಹ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಉದ್ಯಮದಲ್ಲಿ ಮಹಿಳೆಯರು ಸಾಧಿಸುತ್ತಿರುವುದು ಎಲ್ಲ ಕಷ್ಟಗಳನ್ನು ಮೀರಿ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಗಣೇಶ್ ಮಾತನಾಡಿ, ಮಹಿಳೆಯರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ. ಬಹುತೇಕ ಉದ್ಯೋಗ ಕ್ಷೇತ್ರಗಳಲ್ಲಿ ಉದ್ಯಮಿಗಳು ಮಹಿಳಾ ಸಿಬ್ಬಂದಿ, ಕಾರ್ಮಿಕರಿಗೆ ಆದ್ಯತೆ ನೀಡಿ ನೇಮಕ ಮಾಡಿಕೊಳ್ಳುತ್ತಾರೆ.
ಮಹಿಳೆಯರು ಉದ್ಯೋಗ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸ್ವಂತ ಉದ್ಯಮ ಸ್ಥಾಪಿಸಲು ಸಹ ಸರ್ಕಾರದಿಂದ ಸಹಾಯಧನ ಸೌಲಭ್ಯಗಳನ್ನು ಸಿಗುತ್ತವೆ ಎಂದು ತಿಳಿಸಿದರು.
International Women’s Day ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಐದು ವರ್ಷಗಳಿಂದ ಸಮಾನ ಮನಸ್ಕ ಮಹಿಳಾ ಉದ್ಯಮಿಗಳು ಸಂಸ್ಥೆ ಸ್ಥಾಪಿಸಿದ್ದು, ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವಂತೆ ನಿರಂತರ ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಆಸಕ್ತಿ ಯುವತಿಯರು ಹಾಗೂ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ, ಅವರು ಆಸಕ್ತಿ ಹೊಂದಿರುವ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯ ತರಬೇತಿ ಹಾಗೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ಪರಿಹಾರಗಳನ್ನು ಕಲಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಗುತ್ತಿದೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂಎಸ್‌ಎಂಇ ಇಲಾಖೆಯ ಉಪನಿರ್ದೇಶಕ ಆರ್.ಗೋಪಿನಾಥರಾವ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಗಣೇಶ್ ಅವರು ಮಹಿಳಾ ಉದ್ಯಮಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಖಜಾಂಚಿ ಸಹನಾ ಚೇತನ್, ನಿರ್ದೇಶಕಿ ಸವಿತಾ ಮಾಧವ್ ಮತ್ತಿತರರು ಉಪಸ್ಥಿತರಿದ್ದರು.