Agri News ಕುಲಾಂತರಿ ತಳಿಗಳನ್ನು ಪ್ರಯೋಗ ನಡೆಸುವ ಕುರಿತು ರಾಜ್ಯದ ಜೈವಿಕ ತಂತ್ರಜ್ಞಾನ ಸಮನ್ವಯ ಸಮಿತಿಯು ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕುಲಾಂತರಿ ಹತ್ತಿ ಮತ್ತು ಜೋಳ ತಳಿ ಪ್ರಯೋಗ ನಡೆಸಲು ರಾಲೀಸ್ ಇಂಡಿಯಾ ಲಿಮಿಟೆಡ್ ಗೆ ರಾಜ್ಯ ಸರ್ಕಾರವು ನಿರಾಕ್ಷೇಪಣಾ ಪತ್ರವನ್ನು (NOC) ನೀಡಿರುವುದನ್ನು ರಾಜ್ಯ ರೈತ ಸಂಘದ ಮುಖಂಡ ಕೆ ಟಿ ಗಂಗಾಧರ ಖಂಡಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
2024-26 ರ ಅವಧಿಯಲ್ಲಿ ಕುಲಾಂತರಿ ತಳಿಗಳಾದ ಎಂಎಲ್‌ಎಸ್ 4301, ಎಂಎಲ್‌ಎಸ್ 2531 ಎರಡು ತಳಿಗಳ ಪ್ರಯೋಗ ನಡೆಸಲು ಸಭೆಯು ತೀರ್ಮಾನಿಸಿರುವುದು ಗೊತ್ತಾಗಿದೆ.
ಈ ಎರಡು ಹೊಸ ತಳಿಗಳು ಕಳೆನಾಶಕ ಮತ್ತು ಕ್ರಿಮಿನಾಶಕ ನಿರೋಧಕ ಗುಣಗಳನ್ನು ಹೊಂದಿದ್ದು ಇಳುವರಿಯನ್ನು ಶೇಕಡ 30 ರಿಂದ 70ರಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗಿದೆ ಎಂದರು.
ಜೈವಿಕ ತಂತ್ರಜ್ಞಾನದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಸಮುದಾಯದೊಳಗೇ ಸಮಾನ ಅಭಿಪ್ರಾಕ್ಕೆ ಬರಲು ಸಾಧ್ಯವಾಗಿಲ್ಲ. ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ ಅಥವಾ ಬಿ.ಟಿ. ತಂತ್ರಜ್ಞಾನವನ್ನು ಬಳಸುವುದರಿಂದ ಪರಿಸರ, ಪ್ರಾಣಿ, ಪಕ್ಷಿ ಮತ್ತು ಮನುಷ್ಯರ ಆರೋಗ್ಯದ ಮೇಲೆ ಸರಿಪಡಿಸಲಾಗದಂತಹ ದುಷ್ಪರಿಣಾಮಗಳು ಬೀರಲಿವೆ ಎಂಬ ಆತಂಕವನ್ನು ಅಂತರಾಷ್ಟ್ರೀಯ ವಿಜ್ಞಾನಿಗಳು ಕಳೆದ ಇಪ್ಪತ್ತೈದು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ ಎಂದರು.
Agri News ರೈತರ ಬೀಜ ಸ್ವಾತಂತ್ರ್ಯದ ಹರಣ ಕಳೆದ 22 ವರ್ಷಗಳಿಂದ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಬಿ.ಟಿ. ಹತ್ತಿಯು ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಿದ್ದು ನಮ್ಮ ಸ್ಥಳೀಯ ಅನೇಕ ಹತ್ತಿ ತಳಿಗಳು ಸಂಪೂರ್ಣವಾಗಿ ಮಾಯವಾಗಿದೆ. ರೈತರು ಬಿತ್ತನೆ ಬೀಜಕ್ಕಾಗಿ ಪ್ರತಿವರ್ಷ ಕಂಪನಿಗಳ ಮೊರೆಹೋಗುವ ಸ್ಥಿತಿ ಎದುರಾಗಿದೆ. ಇದರಿಂದ ರೈತರು ಬೀಜದ ಸ್ವಾತಂತ್ರವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದರು.