ಪದವಿ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಈ ಆದೇಶದ ಜಾರಿ ಕುರಿತು ಸದ್ಯಕ್ಕೆ ವಿದ್ಯಾರ್ಥಿಗಳ ಮೇಲೆ ಯಾವುದೇ ಬಲವಂತದ ಕ್ರಮ ಜರುಗಿಸ ಬಾರದು ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ.
ಸಂಸ್ಕೃತ ಭಾರತಿ ಟ್ರಸ್ಟ್, ಮಹಾ ವಿಶ್ವವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಮತ್ತಿತರರು ಸರ್ಕಾರದ ಆದೇಶ ರದ್ದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ. ಬಿ. ನರಗುಂದ್ “ಕಳೆದ ವಿಚಾರಣೆ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಬಹುದು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರವನ್ನು ಕೇಳಲಾಗಿತ್ತು. ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಾಲಯಕ್ಕೆ ಒದಗಿಸಲು ಸ್ವಲ್ಪ ಸಮಯ ಅವಕಾಶ ನೀಡಬೇಕು ಎಂದು ಕೋರಿದರು.
ಬಸವನಗುಡಿ ವಿಜಯಾ ಕಾಲೇಜಿನ 6 ಪದವಿ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು ಅವರು, ‘ ಕನ್ನಡ ಕಡ್ಡಾಯ ಆದೇಶ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಏಕಸದಸ್ಯಪೀಠ ವಿಭಾಗೀಯ ಪೀಠಕ್ಕೆ ಕಳುಹಿಸಲಾಗಿದೆ. ಪ್ರಥಮ ವರ್ಷ ಪದವಿಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸಂಸ್ಕೃತ, ಇಂಗ್ಲಿಷ್ ಭಾಷೆ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ. ಆದರೆ, ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಕನ್ನಡ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ತಿಳಿಸಿದರು.
ವಿವಿಗಳು ಕಾಲೇಜುಗಳಿಗೆ ವಿವಿಧ ಕೋರ್ಸ್ ಗಳ ಪ್ರವೇಶ ಅಂತಿಮಗೊಳಿಸಲು ವಿದ್ಯಾರ್ಥಿಗಳ ದಾಖಲಾತಿ ಪತ್ರಗಳನ್ನು ಕಳುಹಿಸುವಂತೆ ಸೂಚಿಸುತ್ತೇವೆ. ಆದ್ದರಿಂದ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ಸಂಸ್ಕೃತ ಭಾರತಿ ಟ್ರಸ್ಟ್ ಪರ ವಾದಿಸಿದ ಹಿರಿಯ ವಕೀಲ ಎಸ್.ಎಸ್. ನಾಗಾನಂದ್ ” ಕನ್ನಡವಲ್ಲದೆ ಇತರ ಭಾಷೆ ಆಯ್ದುಕೊಂಡಿರುವ ವಿದ್ಯಾರ್ಥಿಗಳ ದಾಖಲೆಪತ್ರಗಳನ್ನು ಕಾಲೇಜು ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಕೊಡದೆ ತಡೆ ಹಿಡಿಯುತ್ತೇವೆ ಎಂದು ತಿಳಿಸಿದರು.
ವಾದ ಆಲಿಸಿದ ಪೀಠವು ಕೇಂದ್ರದಿಂದ ಮಾಹಿತಿ ಪಡೆದು ಕೋರ್ಟ್ ಗೆ ತಿಳಿಸಲು ಎಎಸ್ ಜಿ ಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ಮುಂದೂದಿಯಲ್ಲದೆ, ಅರ್ಜಿಯ ಮುಂದಿನ ವಿಚಾರಣೆ ವರೆಗೆ ಕನ್ನಡ ಕಡ್ಡಾಯ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.