Electric bike ಜೀವನ್ ಧಾರ್ ಕುಮಾರ್ ಎಂಬುವವರು ಬೆಂಗಳೂರಿನ ರಾಮನಾಥ್ ಪಿ ಎಮ್ ಮತ್ತು ಮ್ಯಾನೇಜರ್ ಡೆಕ್ಸ್ ಪ್ರೆಸ್ ಮುಂಬೈ ಇವರ ವಿರುದ್ಧ ಸೇವಾನ್ಯೂನ್ಯತೆಗಾಗಿ ಆಪಾದಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಸಲ್ಲಿಸಿದ್ದ ಪ್ರಕರಣದಲ್ಲಿ ಆಯೋಗವು ಎದುರುದಾರ ಕಂಪನಿಯು ಅರ್ಜಿದಾರರಿಗೆ ತಯಾರಿಕಾ ನ್ಯೂನ್ಯತೆಯ ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರ ಜೀವನ್‍ಧಾರ್ ಕುಮಾರ್ ಎಂಬುವವರು ರಾಮನಾಥ್ ಪಿ ಎಮ್ ಇವರಲ್ಲಿ ವಜ್ರ ಸೂಪರ್ ಇ-ಬೈಕ್‍ನ್ನು ರೂ 54,000/- ಗಳಿಗೆ ಖರೀದಿಸಿದ್ದು, ಈ ಎಲೆಕ್ಟ್ರಿಕ್ ಬೈಕ್ ಖರೀದಿಯ ನಂತರ ಉಪಯೋಗಿಸಿದ ಕೆಲ ದಿನಗಳಲ್ಲಿಯೇ ಪದೆ ಪದೆ ಸಮಸ್ಯೆ ಉಂಟುಮಾಡುತ್ತಿದ್ದು, ಕೊನೆಗೆ ರಿಪೇರಿಯಾಗಲಾರದಂತ ಹಂತವನ್ನು ತಲುಪಿರುತ್ತದೆ. ಹೀಗಾಗಿ ಫಿರ್ಯಾದಿದಾರರು ತಯಾರಿ ನ್ಯೂನ್ಯತೆ ಇರುವ ಸರಕು ಎಂದು ಆಪಾದಿಸಿ ಪ್ರಕರಣವನ್ನು ದಾಖಲಿಸಿರುತ್ತಾರೆ.
Electric bike ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈ ಪ್ರಕರಣವನ್ನು ಕೂಲುಂಕಷವಾಗಿ ಪರಿಶೀಲಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರು ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿರುವುದಿಲ್ಲ. ಅದರೆ ಅರ್ಜಿದಾರರು ತಮ್ಮ ಪರ ಒಟ್ಟು 11 ದಾಖಲೆಗಳನ್ನು ಹಾಜರು ಪಡಿಸಿರುತ್ತಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ತಯಾರಿಕಾ ನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರು ಅರ್ಜಿದಾರರಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಯ ಮೊತ್ತವನ್ನು ಶೇ.9 ಬಡ್ಡಿ ಸಮೇತ ರೂ. 51,428.50ಗಳನ್ನು ಮರುಪಾವತಿಸುವಂತೆ ಹಾಗೂ ರೂ.15,000 ಗಳನ್ನು ಮಾನಸಿಕ ಹಿಂಸೆ ಸಂಬಂಧಿಸಿದಂತೆ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಮೊತ್ತವೆಂದು ಅರ್ಜಿದಾರರಿಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಫೆ.01 ರಂದು ಆದೇಶಿಸಿದೆ.