Thirthahalli Maarikamba Jathre ತೀರ್ಥಹಳ್ಳಿ ಪಟ್ಟಣದ ಮಾರಿಕಾಂಬಾ ಜಾತ್ರೆ ಮಾರ್ಚ್ 12 ರಿಂದ 20 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ,ಕ್ರೀಡಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಲದ ಜಾತ್ರೆಯ ವಿಶೇಷವೆಂದರೆ ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಮಾರ್ಚ್ 14 ರಿಂದ 17 ರ ವರೆಗೆ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಯು ಎ.ಪಿ.ಎಂ.ಸಿ. ಪಕ್ಕದಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣದಲ್ಲಿ ಜರುಗಲಿದೆ ಎಂದರು.
ಮಾರ್ಚ್ 12ರಂದು ಜಾತ್ರೆ ಸಾರುವುದರೊಂದಿಗೆ ಆರಂಭಗೊಳ್ಳಲಿದ್ದು,ಮಾ.13ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಸಂಜೆ ೬ಕ್ಕೆ ತೀರ್ಥಹಳ್ಳಿ ನೃತ್ಯ ಕಲಾವಿದರಿಂದ ನೃತ್ಯ ಸಂಭ್ರಮ ನಂತರ ಕಲ್ಲಡ್ಕ ವಿಠ್ಠಲ ನಾಯಕ್ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ ಆಯೋಜಿಸಲಾಗಿದೆ. ಮಾ.14ರಂದು ಸಂಜೆ 7 ಕ್ಕೆ ಪ್ರೊ.ಕೃಷ್ಣೇಗೌಡ ಮೈಸೂರು ಸಂಗಡಿಗರಿಂದ ನಗೆ ನೈವೇದ್ಯ,ಮಾ.15ರ ಸಂಜೆ 7ಕ್ಕೆ ಮಂಗಳೂರಿನ ಸುಪ್ರೀತ್ ಸಫಲಿಗ ಬಳಗದಿಂದ ಸಂಗೀತ ಸೌರಭ ಕಾರ್ಯಕ್ರಮ, ಮಾ.16ರ ಸಂಜೆ ಅಂತರರಾಷ್ಟ್ರೀಯ ಜನಪದ ಕಲಾವಿದೆ ಸವಿತಾ ಗಣೇಶ್ ಪ್ರಸಾದ್ ಅರ್ಪಿಸುವ ಸವಿತ್ತಕ್ಕನ ಅಳ್ಳಿ ಬ್ಯಾಂಡ್ ತಂಡದ ಸಂಗೀತ ರಸಸಂಜೆ ನಡೆಯಲಿದೆ ಎಂದರು.
ಮಾ.17ರಂದು ತೀರ್ಥಹಳ್ಳಿ ಮೂಲದ ಬೆಂಗಳೂರಿನಲ್ಲಿ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ನೃತ್ಯ ವೈಭವ ಹಾಗೂ ಮಾ.18ರಂದು ಸಂಜೆ ಯಕ್ಷ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತ ಪಡಿಸುವ ಪ್ರೊ.ಪವನ್ ಕಿರಣ್ಕೆರೆ ವಿರಚಿತ ಅಯೋಧ್ಯಾ ದೀಪ ಯಕ್ಷಗಾನ ನಡೆಯಲಿದೆ .
ಮಾ.18ರಂದು ರಾತ್ರಿ ಎಣ್ಣೆ ಭಂಡಾರ ಪೂಜೆ,ಮಾ.19ರ ಬೆಳಿಗ್ಗೆ 5ಕ್ಕೆ ಗೊಂಬೆ ಪೂಜೆ ,ಮಧ್ಯಾಹ್ನ 3ರಿಂದ ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ತುಂಗಾನದಿಯಲ್ಲಿ ಗೊಂಬೆ ವಿಸರ್ಜನೆ ನಡೆಯಲಿದೆ ಎಂದರು.
Thirthahalli Maarikamba Jathre ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯದ ಮುಂಭಾಗದ ವೇದಿಕೆಯಲ್ಲಿ ಹಾಗೂ ಅನ್ನಸಂತರ್ಪಣೆಯು ಸುವರ್ಣ ಸಹಕಾರ ಭವನದಲ್ಲಿ ನಡೆಯಲಿದೆ ಎಂದರು.