B. Y. Raghavendra ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಫೆ.22ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಅಂದು 139.41 ಕೋಟಿ ರೂ. ವೆಚ್ಚದ ನಾಲ್ಕು ಕಾಮಗಾರಿಗಳ ಉದ್ಘಾಟನೆ,
2138.30 ಕೋಟಿ ರೂ. ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ವಲಯಕ್ಕೆ ಸೇರಿದ ವಿವಿಧ ಜಿಲ್ಲೆಗಳ 18 ಕಾಮಗಾರಿಗಳನ್ನು ನಿತಿನ್ ಗಡ್ಕರಿ ಅವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 4 ಕಾಮಗಾರಿಗಳ ಉದ್ಘಾಟನೆ, 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಯಾವ್ಯಾವ ಕಾಮಗಾರಿ ಉದ್ಘಾಟನೆಯಾಗಲಿದೆ?
ಕಾಮಗಾರಿ 1 : ಬೈಂದೂರು – ರಾಣೆಬೆನ್ನೂರು ರಸ್ತೆಯ ಮಡೋಡಿ, ಮತ್ತಿಮನೆ, ನಗರ, ಆರೋಡಿ, ಕಾರಣಗಿರಿ, ಮಾವಿನಕೊಪ್ಪ, ಬ್ರಹ್ಮೇಶ್ವರ ಬಳಿ 19.77 ಕೋಟಿ ರೂ. ವೆಚ್ಚದ 7 ಕಿರು ಸೇತುವೆಗಳು.
ಕಾಮಗಾರಿ 2 : ಶಿವಮೊಗ್ಗ ವಿದ್ಯಾನಗರದಲ್ಲಿ 43.90 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆ.
ಕಾಮಗಾರಿ 3 : ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ 20.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸೇತುವೆ.
ಕಾಮಗಾರಿ 4 : ತೀರ್ಥಹಳ್ಳಿಯಲ್ಲಿ 55.62 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ, ಬೈಪಾಸ್ ರಸ್ತೆ
vidyanagara bridge
B. Y. Raghavendra ಯಾವೆಲ್ಲ ಕಾಮಗಾರಿ ಶಂಕುಸ್ಥಾಪನೆಯಾಗಲಿದೆ?
ಶಂಕುಸ್ಥಾಪನೆ 1 : ಹೊಸನಗರದ ಮಾವಿನಕೊಪ್ಪದಿಂದ ಆಡುಗೋಡಿವರೆಗೆ 313.56 ಕೋಟಿ ರೂ. ವೆಚ್ಚದಲ್ಲಿ 13.80 ಕಿ.ಮೀ ಬೈಪಾಸ್ ರಸ್ತೆ, ಬೆಕ್ಕೋಡಿ, ಹೊಸನಗರ ಬಳಿ ಸೇತುವೆಗಳು.
ಶಂಕುಸ್ಥಾಪನೆ 2 : ಶಿವಮೊಗ್ಗದ ಸಿಂಹಧಾಮದಿಂದ ಆನಂದಪುರದವರೆಗೆ 653 ಕೋಟಿ ರೂ. ವೆಚ್ಚದಲ್ಲಿ 4 ಪಥದ ರಸ್ತೆ ನಿರ್ಮಾಣ. ಕುಂಸಿ ಮತ್ತು ಯಡೇಹಳ್ಳಿ ರೈಲ್ವೆ ಮೇಲ್ಸೇತುವೆ. ಕುಂಸಿ, ಚೋರಡಿ, ಕೋಣೆಹೊಸೂರು, ಯಡೇಹಳ್ಳಿ, ಆನಂದಪುರ ಬೈಪಾಸ್ ರಸ್ತೆ ಸೇರಲಿದೆ.
ಶಂಕುಸ್ಥಾಪನೆ 3 : ಹೊಸೂರು ಮತ್ತು ತಾಳಗುಪ್ಪ ಬಳಿ 198.58 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಬೈಪಾಸ್ ರಸ್ತೆ ನಿರ್ಮಾಣ.
ಶಂಕುಸ್ಥಾಪನೆ 4 : ಶಿವಮೊಗ್ಗದ ಸಂದೇಶ್ ಮೋಟರ್ಸ್‌ನಿಂದ ಹರಕೆರೆವರೆಗೆ 39.50 ಕೋಟಿ ರೂ. ವೆಚ್ಚದಲ್ಲಿ 4 ಪಥದ ರಸ್ತೆ ನಿರ್ಮಾಣ.
ಶಂಕುಸ್ಥಾಪನೆ 5 : ಬೈಂದೂರಿನಿಂದ ನಾಗೋಡಿವರೆಗೆ 394.95 ಕೋಟಿ ರೂ. ವೆಚ್ಚದಲ್ಲಿ ದ್ವಿಪಥದ ರಸ್ತೆ ನಿರ್ಮಾಣ.
ಶಂಕುಸ್ಥಾಪನೆ 6 : ತೀರ್ಥಹಳ್ಳಿಯ ನೆಲ್ಲಿಸರದಿಂದ ತೀರ್ಥಹಳ್ಳಿ ಪಟ್ಟಣದವರೆಗೆ 538.71 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ.
ಕಾರ್ಯಕ್ರಮದ ಸ್ಥಳ ಪರಿಶೀಲನೆ ಬಳಿಕ ನೆಹರು ಕ್ರೀಡಾಂಗಣಕ್ಕೆ ತೆರಳಿದ ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದರು. ಸಿದ್ಧತೆಗಳ ಕುರಿತು ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರ ಜೊತೆಗೆ ಚರ್ಚೆ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೀನದಯಾಳು, ಶಿವರಾಜ್, ವಿನ್ಸಟ್ ರೊಡ್ರಿಗಸ್, ಮೋಹನ್ ರೆಡ್ಡಿ, ಮಂಜುನಾಥ್ ನವುಲೆ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.