PM Vishwakarma Yojana ಕುಶಲಕರ್ಮಿಗಳ ಜೀವನ ಮಟ್ಟ ಸುಧಾರಣೆ ಹಾಗೂ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದ್ದು ಅರ್ಹ ಕುಶಲಕರ್ಮಿಗಳು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್ ಗಣೇಶ್ ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಭಾರತ ಸರ್ಕಾರ, ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಇಂದು ಜಿಲ್ಲಾ ವಾಣಿಜ್ಯ ಕೈಗಾರಿಕಾ ಕೇಂದ್ರದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಕರಿತು ಏರ್ಪಡಿಸಲಾಗಿದ್ದ ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಶಲಕರ್ಮಿಗಳನ್ನು ಉತ್ತೇಜಿಸಲು ಪಿ.ಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದ್ದು ಯೋಜನೆಯಡಿ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಬರುತ್ತಾರೆ. ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ನೋಂದಣಿಯಾದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಗುರುತಿನ ಚೀಟಿ ನೀಡಲಾಗುವುದು. ಈ ಯೋಜನೆಯಡಿ ಕುಶಲಕರ್ಮಿಗಳಿಗೆ ತಮ್ಮ ತಮ್ಮ ಕೌಶಲ್ಯದ ಕುರಿತು ಸ್ಟೈಫಂಡ್‍ನೊಂದಿಗೆ 5 ದಿನಗಳ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು. ಹಾಗೂ ಶೇ.5 ರಿಯಾಯಿತಿ ಬಡ್ಡಿದರದಲ್ಲಿ ಮೊದಲ ಹಂತದಲ್ಲಿ ರೂ.1 ಲಕ್ಷ ಸಾಲ, ಅದನ್ನು ಸಮರ್ಪಕವಾಗಿ ಮರುಪಾವತಿಸಿದಲ್ಲಿ ಎರಡನೇ ಹಂತದಲ್ಲಿ ರೂ.2 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಹಾಗೂ ತಮ್ಮ ಕೌಶಲ್ಯತೆಗನುಗುಣವಾಗಿ ರೂ.15 ಸಾವಿರದ ಟೂಲ್‍ಕಿಟ್‍ನ್ನು ನೀಡಲಾಗುವುದು ಎಂದ ಅವರು ಪ್ರಧಾನಮಂತ್ರಿಯವರ ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ಕುಶಲಕರ್ಮಿಗಳು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕೆಂದು ತಿಳಿಸಿದರು.
ಎಂಎಸ್‍ಎಂಇ ಉಪ ನಿರ್ದೇಶಕ ಗೋಪಿನಾಥ್ ರಾವ್ ಮಾತನಾಡಿ, ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಜನರನ್ನು ಬೆಂಬಲಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಕೇಂದ್ರ ವಲಯ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಡಗಿ, ಆರ್ಮರ್, ಪಾಟರ್, ಬಾರ್ಬಲ್, ಟೈಲರ್ ಹೀಗೆ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಒಳಗೊಳ್ಳುತ್ತಾರೆ.
ಕುಶಲಕರ್ಮಿಗಳನ್ನು ಗುರುತಿಸುವ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಈ ಯೋಜನೆ ಉದ್ದೇಶವಾಗಿದೆ. ಕುಶಲಕರ್ಮಿಗಳು ಮೊದಲು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡುವಲ್ಲಿ ಸಿಎಸ್‍ಸಿ ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ನೋಂದಣಿ ನಂತರ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುವುದು. ರೂ. ಶೇ5 ರಿಯಾಯಿತಿ ಬಡ್ಡಿ ದರದಲ್ಲಿ ರೂ.1 ಲಕ್ಷ ಮತ್ತು ರೂ.2 ಲಕ್ಷ ಗಳವರೆಗೆ ಸಾಲ ನೀಡಲಾಗುವುದು.
ಕೌಶಲ್ಯ ಉನ್ನತೀಕರಣ, ಟೂಲ್‍ಕಿಟ್, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲ ನೀಡಲಾಗುವುದು. ಜೊತೆಗೆ ಗವರ್ನಮೆಂಟ್ ಇ ಮಾರ್ಕೆಟಿಂಗ್(ಉem) ಪೋರ್ಟಲ್ ಮೂಲಕ ಸರ್ಕಾರವೇ ಫಲಾನುಭವಿಗಳಿಂದ ಉತ್ಪನ್ನಗಳನ್ನು ಖರೀದಿ ಮಾಡುವುದು. ಶೇ.25 ಎಂಎಸ್‍ಎಂಇ ಯಿಂದ ಸಂಪಾದಿಸಬೇಕೆಂದು ಇದ್ದು, ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಲವೆಡೆ ವ್ಯಾಪಾರ ಮೇಳಗಳನ್ನು ನಡೆಸಲಾಗುತ್ತಿದೆ ಎಂದರು
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಜಿ.ಸುರೇಶ್ ಮಾತನಾಡಿ, ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಒಂದು ಅಧಿಕೃತತೆ ಲಭಿಸಲಿದೆ. ನೋಂದಣಿಯಾದ ಫಲಾನುಭವಿಗಳಿಗೆ ತರಬೇತಿ, ಪ್ರಮಾಣ ಪತ್ರ, ಸಾಲ ಸೌಲಭ್ಯ, ತರಬೇತಿ, ಟೂಲ್ ಕಿಟ್ ಹೀಗೆ ಆರ್ಥಿಕವಾಗಿ ಸಬಲಗೊಳ್ಳಲು ಅನುವಾಗುವಂತಹ ಎಲ್ಲ ಅಂಶಗಳು ದೊರೆಯುತ್ತವೆ. ಕುಶಲಕರ್ಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆ ಕುಶಲಕರ್ಮಿಗಳ ಅಭಿವೃದ್ದಿ ನಿಟ್ಟಿನಲ್ಲಿ ಒಂದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯಡಿ ಸಾಲ ಪಡೆಯುವ ಫಲಾನುಭವಿಗಳು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಆಗ ನಿಮ್ಮ ಸಿಬಿಲ್ ದರ ಹೆಚ್ಚುತ್ತದೆ. ಮುಂದಿನ ಕಂತಿನ ಸಾಲ ಪಡೆಯಲು ಹಾಗೂ ಇತರರು ಸಾಲ ಪಡೆಯಲು ಅನುಕೂಲವಗುತ್ತದೆ. ಈಗಾಗಲೇ ಪಿಎಂ ಸ್ವನಿಧಿ ಯೋಜನೆ ಯಶಸ್ವಿಯಾಗಿದ್ದು ಈ ಯೋಜನೆ ಸಹ ಯಶಸ್ವಿಯಾಗಲಿದೆ ಎಂದು ಹೇಳಿದರು.
PM Vishwakarma Yojana ಎಂಎಸ್‍ಎಂಇ ಜಂಟಿ ನಿರ್ದೇಶಕ ಡಾ,ಕೆ.ಸಾಕ್ರೆಟಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗವರ್ನಮೆಂಟ್ ಇ ಮಾರ್ಕೆಟಿಂಗ್(ಉem) ಪ್ರತಿನಿಧಿ ವಿನೋದ್ ಮಾತನಾಡಿ ಪೋರ್ಟಲ್ ಕಾರ್ಯವಿಧಾನ ಮತ್ತು ಉಪಯೋಗದ ಕುರಿತು ತಿಳಿಸಿದರು. ಎಂಎಸ್‍ಎಂಇ ಉಪ ನಿರ್ದೇಶಕ ಶಶಿಕುಮಾರ್ ನಿರೂಪಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಫಲಾನುಭವಿಗಳು, ಸಿಬ್ಬಂದಿಗಳು ಹಾಜರಿದ್ದರು.
PM Vishwakarma Yojana ಕುಶಲಕರ್ಮಿಗಳ ಜೀವನಮಟ್ಟ ಸುಧಾರಣೆಗಾಗಿ ಪಿಎಂ ವಿಶ್ವಕರ್ಮ ಯೋಜನೆ : ಆರ್.ಗಣೇಶ್
Date: