Department Of Forest ಚಿಕ್ಕಮಗಳೂರು ತಾಲ್ಲೂಕಿನ ತಳಿಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ಗ್ರಾಮಸ್ಥರು ಆತಂಕದಲ್ಲಿದ್ದು ಕೂಡಲೇ ಅವುಗಳ ಸೆರೆಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿ ಗುರುವಾರ ತಳಿಹಳ್ಳ ಗ್ರಾಮಸ್ಥರು ಹಾಗೂ ಬೆಳೆಗಾರರು ರಸ್ತೆ ತಡೆಗೆ ಯತ್ನಿಸಿ ಪ್ರತಿಭಟನೆಗೆ ಮುಂದಾದರು.
ತಳಿಹಳ್ಳ ಪ್ರಾಥಮಿಕ ಸಹಕಾರ ಸಂಘದ ಮುಂಭಾಗದಲ್ಲಿ ಜಮಾಯಿಸಿದ ಗ್ರಾಮಸ್ಥರು ಹಾಗೂ ಬೆಳೆಗಾರರು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.
ಬಳಿಕ ಕಾಫಿ ಬೆಳೆಗಾರ ಮಲ್ಲೇಗೌಡ ಮಾತನಾಡಿ ಸಕಲೇಶಪುರ ಭಾಗದಿಂದ ಬಂದಿರುವ ಸುಮಾರು ೨೦ ಕ್ಕೂ ಹೆಚ್ಚು ಕಾಡಾನೆಗಳು ತಳಿಹಳ್ಳ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ದಾಳಿ ನಡೆಸಿವೆ. ಕಳೆದ ಮೂರು ದಿನಗಳಲ್ಲಿ ಐವತ್ತು ಎಕರೆಗೂ ಪ್ರದೇಶದಲ್ಲಿ ಬೆಳೆದಿರುವ ಕಾಫಿ, ಬಾಳೆ, ಅಡಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಇವುಗಳನ್ನು ಸ್ಥಳಾಂತರಿ ಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಬಹುತೇಕ ಸಣ್ಣ ರೈತರಿದ್ದಾರೆ. ಒಂಟಿ ಮನೆಗಳೇ ಹೆಚ್ಚಾಗಿದ್ದು ಕಳೆದ ವಾರದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು, ಹಿರಿಯರು ಓಡಾಡುವುದೇ ಕಷ್ಟವಾಗಿದೆ. ಶಾಸಕರು, ಅರಣ್ಯ, ಕಂದಾಯ ಇಲಾಖೆ ಸಂಬಂಧಿಸಿದ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದರು.
ವಾರದ ಗಡುವಿನೊಳಗೆ ಕಾಡಾನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಕಂದಾಯ ಇಲಾಖೆ ಬೆಳೆಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು.
ಶಾಸಕಿ ನಯನಾ ಮೋಟಮ್ಮ, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
Department Of Forest ವಸ್ತಾರೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಯು.ರತೀಶ್ ಮಾತನಾಡಿ, ತಳಿಹಳ್ಳ, ಕಟ್ರುಮನೆ, ಉಳುವಾಗಿಲು, ಇಳೆಹೊಳೆ ಹಾಗೂ ಜಕ್ಕನಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣ ಸಿಕೊಂಡು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಇದ್ದರೂ ಗ್ರಾಮದ ಪರಿಸ್ಥಿತಿ ಅವಲೋಕನ ಮಾಡುತ್ತಿಲ್ಲ. ಕಾರ್ಮಿಕರು ಕೆಲಸಕ್ಕೆ ಬಾರದೆ ಬೆಳೆದ ಅರೇಬಿಕಾ ಕಾಫಿ ಫಸಲು ಒಣಗಿ ಉದುರುತ್ತಿದೆ ಎಂದರು.
ಹೀಗಾಗಿ ಕೂಡಲೇ ಅರಣ್ಯ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡ ಬೇಕು. ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಕೆ.ಪುನೀತ್, ಕೆ.ಬಿ.ನಾಗೇಶ್, ಟಿ.ಪಿ.ಮಹೇಶ್, , ಕೆ.ಪಿ.ಸುರೇ ಶ್, ಟಿ.ಪಿ.ನರೇಂದ್ರ ಹಾಗೂ ಐದೂರು ಗ್ರಾಮಸ್ಥರು ಹಾಜರಿದ್ದರು.
