Acharya Tulsi National College of Commerce ಕುಷ್ಟರೋಗವನ್ನು ಸಾಮಾಜಿಕ ಪಿಡುಗು ಎನ್ನುವ ರೀತಿಯಲ್ಲಿ ಜನರು ಬಿಂಬಿಸಿದ್ದಾರೆ. ಆದರೆ ಇದು ಸಾಮಾಜಿಕ ಪಿಡುಗು ಅಲ್ಲ. ಬದಲಾಗಿ ಪ್ರೀತಿಯಿಂದ ಅವರ ಚಿಕಿತ್ಸೆಗೆ ಸಹಕಾರ ನೀಡಬೇಕು ಎಂದು ಚರ್ಮರೋಗ ತಜ್ಞ ವೈದ್ಯರಾದ ಡಾ.ದಾದಾಪೀರ್ ತಿಳಿಸಿದರು.
ರಾಷ್ಟ್ರಪಿತ ಮಹಾತ್ಮಾಗಾಂಧಿ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ- 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರು ಪರಸ್ಪರರನ್ನು ಗಮನಿಸುವುದು ಮುಖ್ಯವಾಗಿದೆ. ಕುಷ್ಠರೋಗ ಅನೇಕ ವರ್ಷಗಳ ಕಾಲದಿಂದ ಜನರನ್ನು ಕಾಡುತ್ತಿರುವ ಒಂದು ಕಾಯಿಲೆ ಆಗಿದೆ ಇದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಾಗಿದೆ.
ಕಾಯಿಲೆಯ ಗುಣಲಕ್ಷಣಗಳನ್ನು ತಿಳಿದುಕೊಂಡರೆ ಮಾತ್ರ ಕಾಯಿಲೆ ಇದೆ ಎಂಬುದು ಕಂಡುಹಿಡಿಯಲು ಸಾಧ್ಯ. ಸ್ಪರ್ಶ ಜ್ಞಾನ ಇಲ್ಲದೇ ಇರುವುದು, ಕೂದಲು ಬೆಳೆಯದಿರುವುದು, ಬೆವರು ಬಾರದಿರುವುದು ಈ ರೀತಿ ಕಾಯಿಲೆಯ ಪ್ರಾಥಮಿಕ ರೋಗಲಕ್ಷಣಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ನಮ್ಮೆಲ್ಲರ ಹೊಣೆ ಆಗಿದೆ.
Acharya Tulsi National College of Commerce ಕಾಯಿಲೆಯ ಗುಣಲಕ್ಷಣಗಳು ಕಂಡು ಬಂದ ತಕ್ಷಣ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡಿಸಬೇಕು. ಸರ್ಕಾರಿ ಆಸ್ಪತ್ರೆಯಗಳಲ್ಲಿ ಕುಷ್ಟರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಯಿಲೆಯ ಕುರಿತು ಜಾಗೃತಿ, ಅರಿವು ಹೆಚ್ಚಬೇಕು ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಕಿರಣ್ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಜನರು ಜೀವನ ನೆಮ್ಮದಿಯಿಂದ ನಡೆಸಲು ಸಾಧ್ಯ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸುವುದು ಹಾಗೂ ಜಾಗೃತಿ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ.
ಕುಷ್ಠರೋಗ ಎಂಬುದು ಸಮಾಜದಲ್ಲಿ ಹಿಂದಿನಿಂದ ಇದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಅದು ನಿಧಾನವಾಗಿ ಹರಡುತ್ತಿದೆ. ಆದರೆ,ಎಷ್ಟೋ ಜನರು ರೋಗಲಕ್ಷಣಗಳಿಗೆ ಚಿಕಿತ್ಸೆ ಪಡೆಯುತ್ತಿಲ್ಲ. ಹಿಂಜರಿಯುತ್ತಾರೆ. ಅವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಸೋಂಕು ಹರಡದಂತೆ ಎಲ್ಲರೂ ಕಾಳಜಿ ವಹಿಸಿ ಸರಿಯಾದ ಚಿಕಿತ್ಸೆ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ.ಆರ್, ಉಪನ್ಯಾಸಕರಾದ ಪ್ರೋ. ಜಗದೀಶ್, ದೊಡ್ಡ ವೀರಪ್ಪ ,ಕೆ ಎಂ ನಾಗರಾಜು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.