Thursday, October 3, 2024
Thursday, October 3, 2024

Warahi Committee ಜನವರಿ 28ಕ್ಕೆ ಮುಳುಗಡೆ ಒಡಲಾಳ ಪುಸ್ತಕ ಬಿಡುಗಡೆ

Date:

Warahi Committee ನಾವುಗಳು ಮುಳುಗಡೆ ಸಂತ್ರಸ್ತರು ಊರು ಬೆಟ್ಟಿದ್ದು ಬರಿಗೈಯಲ್ಲಲ್ಲವಂತೆ. ನಮ್ಮ ಭೂಮಿ ಮನೆ ಗಳಿಗೆ ಪರಿಹಾರ ತಗೊಂಡೇ ಹೊರಟವರಂತೆ. ಕೇಳಿದಿರಲ್ಲಾ ಕೆ ಪಿ ಸಿ ಯವರ ಮಾತು.ಆ ಪರಿಹಾರದ್ದೇ ಒಂದು ಕಥೆ.ಅದು ಸಣ್ಣದಲ್ಲ.

ಮುಳುಗಡೆ ಜಮೀನು ಮನೆಗಳಿಗೆ ಪರಿಹಾರ ನೀಡುವ ಬಹು ಮೊದಲೇ ಅಣೆಕಟ್ಟು ಕಟ್ಟಲು ಆರಂಭಿಸಿದ್ದರು.!. ನೋಡನೋಡುತ್ತಲೇ ಮುಖ್ಯ ಕಟ್ಟಿನ ತಳಪಾಯದ ಕೆಲಸ ಮುಗಿದೇ ಹೋಯಿತು. ಆಗ ರಚನೆ ಆಗಿದ್ದು ವಾರಾಹಿ ಮುಳುಗಡೆ ಹೋರಾಟ ಸಮಿತಿ.
ಹೊಸನಗರ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಯ ಪ್ರದೇಶದ ಮತ್ತು ತೀರ್ಥಹಳ್ಳಿಯ ಎರಡು ಪಂಚಾಯಿತಿಯ ಪ್ರದೇಶದ 18 ಗ್ರಾಮಗಳ 195 ಊರುಗಳು ಮುಳುಗಡೆ ಆಗಲಿದ್ದವು. ಎರಡು ಸಾವಿರಕ್ಕೂ ಹೆಚ್ಚು ಕುಟುಂಬದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಲಿದ್ದರು. 40 ದೇವಾಲಯಗಳು, 40 ಶಾಲೆ,ಒಂದು ಹಂಚಿನ ಕಾರ್ಖಾನೆ, ಮೂರು ಅಕ್ಕಿ ಗಿರಣೆ ಮುಳುಗಲಿದ್ದವು. 855 ಎಕ್ರೆ ಅಡಿಕೆ ತೋಟ, 4000 ಎಕ್ರೆ ಬತ್ತದ ಗದ್ದೆ,9890 ಎಕ್ರೆ ಖುಷ್ಕಿ ಜಮೀನು ಮುಳುಗಡೆ ಆಗಲಿತ್ತು. 38600 ಎಕ್ರೆ ಕಾಡು ಸಹ ಮುಳುಗುತ್ತಿತ್ತು .

ಇಷ್ಟೆಲ್ಲ ಮುಳುಗಿಸುವ ಯೋಜನೆಯೊಂದು ಸಂತ್ರಸ್ತರ ಕುರಿತು ಕುರುಡಾಗಿ ತಳಪಾಯ ಹಾಕಿಸಿಕೊಂಡಿತ್ತು. ಆಗ ಶಾಸಕರಾಗಿದ್ದವರು ತೀರ್ಥಹಳ್ಳಿಯಲ್ಲಿ ಕಡಿದಾಳ್ ದಿವಾಕರ್ ಮತ್ತು ಹೊಸನಗರದಲ್ಲಿ ಸ್ವತಃ ಇದೇ ಮುಳುಗಡೆಯ ಸಂತ್ರಸ್ತರಾಗಲಿದ್ದ ಶೀರ್ನಾಳಿ ಚಂದ್ರಶೇಖರ್. ಇವರುಗಳು ಮುಂದೆ ಬದಲಾಗಿ ಡಿ.ಬಿ.ಚಂದ್ರೇಗೌಡ ಮತ್ತು ಸೊನಲೆ ಸ್ವಾಮೀರಾವ್ ಆ ಜಾಗಕ್ಕೆ ಬಂದರು. ಒಂದೇ ಮಾತಿನಲ್ಲಿ ಇವರೆಲ್ಲರ ಕುರಿತು ಹೇಳಬೇಕು ಎಂದರೆ ಇವರುಗಳು ಸಂತ್ರಸ್ತರ ಜೊತೆಗಿದ್ದರು. ಅವರವರ ಕರ್ತವ್ಯ ಅವರವರು ಮಾಡಿದರು.ನಮ್ಮ ಶೋಷಣೆಯ ಪಾಲುದಾರರೂ ಇವರ್ಯಾರೂ ಆಗಿರಲಿಲ್ಲ. ವಿದಾನ ಸಭೆಯ ಅಧ್ಯಕ್ಷರಾಗಿದ್ದ ಚಂದ್ರೇಗೌಡರೂ ನಮ್ಮ ಎಲ್ಲಾ ಕೋರಿಕೆ ಪರ ನಿಂತವರು. ಸ್ವಾಮೀ ರಾವ್ ನಮಗಾಗಿ ಜೈಲಿಗೂ ಬಂದವರು. ಈಗಿನ ರಾಜಕಾರಣ ನೋಡಿದ ನನಗೆ ನಮ್ಮ ಈ ಪ್ರತಿನಿಧಿಗಳು ಸಾವಿರ ಪಾಲಿಗೆ ಬೇಕು ಅನಿಸಿದ್ದು ಸುಳ್ಳಲ್ಲ.

Warahi Committee ನಮ್ಮ ಹೋರಾಟ ಸಮಿತಿಯ ನಾಯಕತ್ವ ವಹಿಸಿದ್ದು ಕಾಳಮ್ಮನ ಗುಡಿ ಶ್ರೀನಿವಾಸ್. ನನ್ನ ಜೀವನದಲ್ಲಿ ಅಂತದೊಬ್ಬ ಹೋರಾಟಗಾರನನ್ನ ಮತ್ತೆ ಕಂಡಿಲ್ಲ.ಅವರು ಕಮ್ಯುನಿಷ್ಟರು. ಆದರೆ ಹೋರಾಟದಲ್ಲಿ ಪಕ್ಷ ರಾಜಕೀಯ ತರಲಿಲ್ಲ.ನಮ್ಮ ಹಣದಿಂದ ಅವರು ಹೋರಾಟ ಮಾಡಲಿಲ್ಲ.ಬಸ್ ಹತ್ತಿ ಯಡೂರಿಗೆ ಬರುತ್ತಿದ್ದರು.ನಮಗೆ ನ್ಯಾಯ ದೊರಕಿಸುವ ಹೊರತಾದ ಯಾವ ಬೇರೆ ಉದ್ದೇಶವೂ ಅವರಿಗೆ ಇರಲಿಲ್ಲ.ಮುಂದಿನ ನನ್ನ ಬದುಕಿನಲ್ಲಿ ಯಾವೆಲ್ಲಾ ಹೋರಾಟ ಅದರ ನಾಯಕರನ್ನು ಕಂಡಿರುವ ನನಗೆ ಕಾಳಮ್ಮನ ಗುಡಿಯಂತಹ ಮತ್ತೋರ್ವ ವ್ಯಕ್ತಿ ಕಾಣಿಸಿಲ್ಲ.ಇವರಿಗೆ ಸಾರಥಿಯಾದವರು ಯಡೂರು ಭಾಸ್ಕರ ಜೋಯ್ಸರು. ಇನ್ನೂ ಅನೇಕರಿದ್ದರು. ಆದರೂ ಸಂತ್ರಸ್ತರ ಹೋರಾಟದಲ್ಲಿ ಈ ಎರಡೂ ಹೆಸರು ನೆನಪಿಗೆ ಬರುವಂತಾದ್ದು.
ಇಷ್ಟೆಲ್ಲ ಇದ್ದೂ ನಮಗೆ ನ್ಯಾಯ ಸಿಕ್ಕಿತಾ, ನಮ್ಮ ಭೂಮಿ ಮನೆಗೆ ಗೌರವಯುತ ಪರಿಹಾರ ಕೊಟ್ಟರಾ, ಅಧಿಕಾರಿಗಳು ಸೌಜನ್ಯದಿಂದ ನಡೆದು ಕೊಂಡರಾ, ಜಮೀನು ಮನೆ ಮಾರು ಕಳಿದುಕೊಂಡ ನಮ್ಮ ಕುರಿತು ಕಿಂಚಿತ್ತಾದರೂ ಸಹಾನುಭೂತಿ ಎಲ್ಲಾದರೂ ಇತ್ತೇ ?..ಎಂಬೆಲ್ಲಾ ಪ್ರಶ್ನೆ ಕೇಳಿದರೆ…ಇಲ್ಲವೇ ಇಲ್ಲ ಎಂದು ಒಂದೇ ಉತ್ತರ ಹೇಳಲೇ ಬೇಕು.

ಮೊದಲನೆಯದಾಗಿ ನಮ್ಮ ಈ ಊರಿನ ಜನ ತುಂಬಾ ಮುಗ್ದರು. ಹೆಚ್ಚನ ಕೃಷಿಕರು ಅನಕ್ಷರಸ್ತರು. ಪ್ಯಾಂಟು ತೊಟ್ಟ ಬರುವ ಯಾರನ್ನೇ ಆದರೂ ಕೈ ಮುಗಿದು ಮಾತನಾಡಿಸಿದವರು.

ಐದೆಂಟು ವರ್ಷದ ಈ ಬವಣೆಯೂದ್ದಕ್ಕೂ ಯಾವುದೇ ಸರ್ಕಾರದ ವಾಹನಕ್ಕೆ ನಾವು ಕಲ್ಲು ತೂರಿದ್ದಿಲ್ಲ,ಒಂಟಿಯಾಗಿ ಸೈಟುಗಳಲ್ಲಿ ನಿಲ್ಲುತ್ತಿದ್ದ ಕೆಪಿಸಿ ಜೀಪುಗಳಿಗೆ ಗುಟ್ಟಲ್ಲಾದರೂ ಬೆಂಕಿ ಹಚ್ಚಿದವರಲ್ಲ.ಹಳ್ಳಿಗೆ ಬಂದ ಕಂದಾಯ ಅಥವಾ ಕೆಪಿಸಿ ಅಧಿಕಾರಿಗಳಿಗೆ ಒಂದು ಮಾತು ಬೈದವರಲ್ಲ.ಮನೆಗೆ ಬಂದವರಿಗೆ ಅವರು ನಮ್ಮನ್ನು ಮುಳುಗಿಸಲೇ ಬಂದವರಾದರೂ ನಾವು ಊಟದ ಸಮಯ ಊಟ ಕೊಟ್ಟಿದ್ದೇವೆ. ಮಜ್ಜಿಗೆ, ಕಾಫಿ,ಟೀ ಕೊಡದೇ ಯಾರನ್ನೂ ಹಾಗೇ ಕಳಿಸಿದವರೇ ಅಲ್ಲ.ಹೋಗುವವರಿಗೆ ಬೆಳೆದ ಬಾಳೆಹಣ್ಣೋ, ಹಲಸೋ ನಮ್ಮ ಹತ್ತಿರ ಇದ್ದದ್ದು ಕೊಟ್ಟು ಕಳಿಸಿದ್ದೇವೆ.
ಇಷ್ಟೆಲ್ಲ ಇದ್ದೂ ಯಾವ ಅಧಿಕಾರಿಯೂ ಅವರ ಕಛೇರಿಯಲ್ಲಿ ನಮ್ಮನ್ನು ಗೌರವದಿಂದ ಕಂಡಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಬಾಗಿಲಿಗೆ ಹೋದವರು ಚೀಟಿ ಕೊಟ್ಟು ಕಾದು ಒಳಹೋಗಬೇಕು, ಅಲ್ಲಿ ಬೇಕಾದಷ್ಟು ಖುರ್ಚಿಗಳಿದ್ದರೂ ಅದು ನಮ್ಮಂತಹವರಿಗಲ್ಲ!. ಕೂರಿಸಿ ನಮ್ಮ ಸಮಸ್ಯೆ ಕೇಳಲು ಅವರು ನಮ್ಮ ಸೇವಕರಲ್ಲ.

ನಮ್ಮದೇ ಭೂಮಿಗೆ ಪರಿಹಾರ ನೀಡುವುದಾದರೂ ಅವರು ದಾನ ನೀಡಿದಂತೆ ವರ್ತಿಸುತ್ತಿದ್ದರು. ಮನೆ ಬೆಲೆ ಕಟ್ಟುವ ಕಾರ್ಯ ಕೆಪಿಸಿಯವರದ್ದು. ಆಗ ಅವರು ನಡೆಸಿದ ಬಾನಗಡಿ ಹೇಳಿದರೆ ಅದೊಂದು ಕಾದಂಬರಿ ಆಗುತ್ತದೆ. ಮನುಷ್ಯ ಮಾತ್ರರಲ್ಲಿರಬಹುದಾದ ದುಷ್ಟತನದ ಪರಮಾವದಿಯ ದಿಗ್ದರ್ಷನ ಆಗಿತ್ತು ನಮಗೆ ಅಂದರೆ ಅದು ಬಹಳ ಸ್ವಲ್ಪ ಹೇಳಿದಂತೆ.

ನಾವಾಗ ಕೇಳಿದ ಪರಿಹಾರವೇ ಕಡಿಮೆ. ಅಡಿಕೆ ತೋಟಕ್ಕೆ ಎಂಬತ್ತು ಸಾವಿರ,ತರಿಗೆ ಹದಿನೈದು ಸಾವಿರ, ಖುಷ್ಕಿಗೆ ಐದು ಸಾವಿರ ಮತ್ತು ಮನೆಗೆ ನ್ಯಾಯವಾದ ಬೆಲೆ ಇಷ್ಟೇ ನಾವು ಕೇಳಿದ್ದು. ಆದರೆ ಇದರ ಅರ್ದವೂ ಸರ್ಕಾರ ಕೊಡಲಿಲ್ಲ. ಕಡೆಗೆ ಕೋರ್ಟಿಗೆ ಹೋದರೂ, ಅದೂ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರೂ ನಮಗೆ ತೋಟಕ್ಕೆ ಐವತ್ತು ಸಾವಿರ ಪಡೆಯಲೂ ಆಗಲಿಲ್ಲ. ಇದು ನಮ್ಮ ನೈಜ ಕಥೆ.
ಎಲ್ಲಾ ಸೇರಿ ಒಂದು ಇಪ್ಪತ್ತೈದು ಕೋಟಿ ಕೊಟ್ಟಿದ್ದರೆ ನಮಗೆ ಎರಡೂ ಕಾಲು ಸಹಸ್ರ ಕುಟುಂಬಕ್ಕೆ ತೃಪ್ತಿ ಆಗಿರುತ್ತಿತ್ತು. ಕಣ್ಣೀರು ಹಾಕಿ ನಮ್ಮನ್ನು ಬಲಾತ್ಕಾರವಾಗಿ ಕಳಿಸಿಕೊಡಬೇಕಿರಲಿಲ್ಲ. ಕಂಬ ಕಂಬ ಸುತ್ತಿಸಬೇಕಿರಲಿಲ್ಲ. ಪ್ರದಕ್ಷಿಣೆಗೆಲ್ಲಾ ದಕ್ಷಿಣೆ ಕೀಳಬೇಕಿರಲಿಲ್ಲ. ನಾವು ಜೀವಂತ ಇರುವಾಗಲೇ ಒಬ್ಬರು ಮಾಂಸ ಕಿತ್ತು ತಿನ್ನುತ್ತಿದ್ದಾಗ ಮತ್ತೊಬ್ಬರು ರಕ್ತ ಹೀರುತ್ತಿದ್ದರು ಎಂಬುದು ಬಹಳ ಕಡಿಮೆ ಹೇಳಿದಂತೆ. ಕೆಪಿಸಿ, ಮುಳುಗಡೆ ಆಫೀಸ್, ಕೋರ್ಟು ಎಲ್ಲೂ ಎಲ್ಲೆಲ್ಲೂ ನಮ್ಮನ್ನು ಮನುಷ್ಯರಾಗಿ ನೋಡಲೇ ಇಲ್ಲ.

ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ. ನಾನು ಈ ಜನರನ್ನು ಕಟ್ಟಿಕೊಂಡು ಕಛೇರಿ ಹತ್ತಿಳಿದಿದ್ದೇನೆ. ಅಧಿಕಾರಿಗಳ ಹತ್ತಿರ ಜಗಳ ಕಾದಿದ್ದೇನೆ. ಕೇಸು ಹಾಕಿಸಿಕೊಂಡು ಜೈಲು ಸೇರೀದ್ದೇನೆ.ಆದರೆ ಎಲ್ಲೂ ಒಂದು ಪ್ರೀತಿ,ತ್ಯಾಗ ಮಾಡುತ್ತಿರುವವರು ಎಂಬ ಗೌರವ,ಮನೆಮಠ ಬಿಟ್ಟು ಹೋಗುವವರು ಎಂಬ ಕರುಣೆ ಕಂಡಿದ್ದೇ ಇಲ್ಲ.ರಣಹದ್ದುಗಳ ಪ್ರತ್ಯಕ್ಷ ದರ್ಶನ ನನಗೆ ಉದ್ದಕ್ಕೂ ಆಗಿದೆ.

ಕಲ್ಲು ಹೊಡೆಯಬೇಕಿತ್ತು. ಕಛೇರಿಗೆ ನುಗ್ಗಿ ಗರ್ವ ತೋರುವ ಅಧಿಕಾರಿ ರಟ್ಟೆ ಹಿಡಿದು ಹೊರಗೆಳೆದು ತಂದು ತಫರಾಕಿ ಕೊಡಬೇಕಿತ್ತು ,ಜೀಪಿಗೆ ಬೆಂಕಿ ಹಾಕಬೇಕಿತ್ತು, ಎಂದು ಇವತ್ತಿಗೂ ನಮಗೆ ಅನಿಸದಿರಲು ಕಾರಣ ನಾವು ಹುಟ್ಟಿ ಬೆಳೆದ ಪರಿಸರ. ಇಡೀ ಮುಳುಗಡೆ ನಮ್ಮ ಊರಿನಲ್ಲಿ ಇಪ್ಪತ್ತು ಸಾವಿರ ಜನರಲ್ಲಿ ಪೊಲೀಸ್ ಠಾಣೆ ಏರಿಬಂದವರು ನೂರಿನ್ನೂರೂ ಇರಲಿಕ್ಕಿಲ್ಲ. ಜೈಲಿಗೆ ಅಪರಾಧ ಮಾಡಿ ಹೋದವರೇ ಇರಲಿಲ್ಲ.ಒಂದೇ ಒಂದು ಕೊಲೆ ನಮ್ಮ 195 ಮುಳುಗಿದ ಊರಲ್ಲಿ ನಡೆದದ್ದು ನನಗೆ ಗೊತ್ತಿಲ್ಲ. ಹೌದು ನನಗೆ ನೆನಪಾಗುತ್ತಿದೆ. ಓರ್ವ ಡ್ಯಾಮಿನ ರಸ್ತೆಯಲ್ಲಿ ನಮ್ಮೂರ ಚಂದ್ರಶೇಖರ ಎಂಬ ಯುವಕನನ್ನು ಹಾಡುಹಗಲೇ ಮುಖ್ಯ ರಸ್ತೆಯ ಬದಿ ಬಡಿದು ತಲೆ ಒಡೆದು ಸಾಯಿಸಿದ್ದರು. ಅದೂ ಎಲ್ಲಿಂದಲೋ ಬಂದ ಅಪರಿಚಿತ ವ್ಯಕ್ತಿಗಳು. ನಮ್ಮ ಮುಳುಗಡೆಯ ಓರ್ವ ಯುವಕ ಅಕಾರಣ ಕೊಲೆ ಆಗಿದ್ದ. ಇದು ಬಿಟ್ಟರೆ ಮನುಷ್ಯ ಮನುಷ್ಯನನ್ನ ಕೊಲ್ಲುತ್ತಾರಂತೆ ಎಂದು ನಮ್ಮ ಊರವರಿಗೆ ಗೊತ್ತೇ ಇರಲಿಲ್ಲ.ನಮ್ಮ ಮುಗ್ದತೆಯೇ ನಮ್ಮ ಶತ್ರು ಆಗಿದ್ದು ಈಗ ನಮ್ಮ ಅರಿವಿಗೆ ಬರುತ್ತಿದೆ.

ಯಾರೋ ಹೌದು ದೇಶಕ್ಕೆ ಬೆಳಕು ನೀಡಲು ನಿಮ್ಮ ತ್ಯಾಗ ಅಗತ್ಯವಾಗಿತ್ತು ಎಂದಾಗ ನಮ್ಮ ಮೈ ಉರಿಯುತ್ತದೆ. ಸ್ವಾಮೀ ನಮಗೆ ದಯವಿಟ್ಟು ಬುದ್ದಿ ಹೇಳಬೇಡಿ. ನಾವು ನಮ್ಮ ಊರು ಮುಳುಗಿಸಬೇಡಿ ಎಂದು ಎಂದೂ ಕೇಳಲೇ ಇಲ್ಲ.ನಾವು ಕೇಳಿದ್ದು ಪುನಃ ನಮ್ಮ ಬದುಕನ್ನು ಕಟ್ಟಿಕೊಳ್ಳಲು ನ್ಯಾಯಯುತ ಪರಿಹಾರ. ಅದನ್ನು ಗೌರವದಿಂದ ಕೊಡಬಹುದಿತ್ತಲ್ಲ.ಈಗ ಬೆಲೆಯ ನಾಲ್ಕು ಪಟ್ಟು ಕೊಡಬೇಕು ಎಂಬ ಕಾಯ್ದೆ ಇದೆ. ನಾವು ಮತ್ತೆ ಇಷ್ಟೇ ಭೂಮಿ ಕೊಳ್ಳಲು ಎಷ್ಟು ಬೇಕೋ ಅಷ್ಟು ಕೇಳಿದ್ದು. ಅದರ ಅರ್ದವೂ ಕೊಡಲಿಲ್ಲ. ಅದನ್ನೂ ಗೌರವದಿಂದ ಕೊಡಲಿಲ್ಲ.ನ್ಯಾಯವಾಗಿ ಕೊಡದಿದ್ದರೂ ಕೊಟ್ಟ ಆರು ಮೂರು ಕಾಸಿನಲ್ಲೂ ನಿಮ್ಮ ಪಾಲು ಕೇಳಿದ್ದೀರಿ. ಕಿತ್ತಿದ್ದೀರಿ. ಆದರೂ ಏನೋ ಉಪಕಾರ ಮಾಡುತ್ತಿರುವವರಂತೆ ಉದ್ದಕ್ಕೂ ವರ್ತಿಸಿದ್ದೀರಿ. ಹೇಳಿದರೆ ನಿಮ್ಮ ಕಥೆ ಇಡೀ ಜೀವನಕ್ಕೆ ಸಾಕಾಗುವಷ್ಟಿದೆ. ನಾಚಿಕೆ ಆಗಬೇಕು ನಿಮ್ಮ ಬದುಕಿಗೆ.

ನಮ್ಮ ಬದುಕು ಕಿತ್ತು ನೀವು ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ನಿಮ್ಮ ಇಡೀ ಬಾನಗಡಿಯ ಇಂಚಿಂಚೂ ನನಗೆ ಗೊತ್ತು.ಸಂಕ್ಷಿಪ್ತವಾಗಿಯಾದರೂ ಒಂದೊಂದನ್ನೂ ಬಿಚ್ಚಿಡುವೆ. ನಮ್ಮ ತ್ಯಾಗದ ಸಮಾದಿ ಮೇಲೆ ಕಟ್ಟಿರುವ ಲೋಕೋಪಯೋಗೀ ಬೆಳಕಿನ ಪ್ರಕಾಶದ ಕಥೆ!. ಹೊಟ್ಟೆ ಒಳಗಿನ ಆಕ್ರೋಶ ಎಷ್ಟು ಕಾಲ ಒಳಗೇ ಇಟ್ಟುಕೊಳ್ಳುವುದು..ಒಮ್ಮೆ ಕಾರಿಕೊಂಡು ಬಿಡಬೇಕು. ಅಲ್ಲವೇ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...

Mahatma Gandhi ಗಾಂಧಿ ಟೋಪಿ ಧಾರಣೆ ಕೇವಲ ತೋರಿಕೆಯಾಗಬಾರದು. ಆದರ್ಶಗಳ ಪಾಲನೆಯಾಗಬೇಕು-ಡಾ.ಎಚ್.ಬಿ.ಮಂಜುನಾಥ್.

Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ...