Acharya Tulsi National College of Commerce ಹೆಣ್ಣು ಶಿಕ್ಷಣ ಪಡೆದರೆ ಕುಟುಂಬ, ಸಮಾಜ ಎಲ್ಲವೂ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಶೋಷಣೆಯ ವಿರುದ್ಧ ದನಿ ಎತ್ತಲು ಈ ಅರಿವಿನ ದಾರಿ ಪ್ರಯೋಜನಕಾರಿ. ಸ್ವಾವಲಂಬನೆ, ಆತ್ಮ ವಿಶ್ವಾಸಕ್ಕೆ ಶಿಕ್ಷಣವೆ ಬುನಾದಿ. ಹೆಣ್ಣು ಮಕ್ಕಳನ್ನು ಮೋಸಗೊಳಿಸುವ ದುಷ್ಟ ಜಾಲದ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಇಂದಿನ ಸಾಮಾಜಿಕ ಜಾಲತಾಣ ಗಳಿಂದ ಸ್ತ್ರೀಯರ ಮೇಲೆ ಹೊಸ ಬಗೆಯ ದೌರ್ಜನ್ಯಗಳು ನಡೆಯುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಈ ಕುರಿತು ತಿಳುವಳಿಕೆ ಕೊಡುವ ಅಗತ್ಯವಿದೆ” ಎಂದು ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜು ಹಮ್ಮಿಕೊಂಡ ” ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ” ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಕಿರುತೆರೆ ನಿರೂಪಕಿ ಡಾ. ಕವಿತಾ ಸಾಗರ್, ” ಹೆಣ್ಣು ಮಕ್ಕಳಿಗೆ ಸಮಾಜ ಹೆಚ್ಚಿನ ಜವಾಬ್ದಾರಿ ನೀಡಿದೆ. ಆದರೆ ಇಂದು ಸಮಾನತೆಯ ಆಶಯವೇ ಮುಖ್ಯವಾಗಿರುವುದರಿಂದ ಹೆಣ್ಣು ಮಕ್ಕಳನ್ನು ಸಮಾನ ದರ್ಜೆಯ ನಾಗರೀಕರಾಗಿ ಕುಟುಂಬ ವಲಯದಲ್ಲಿಯೂ ಗುರುತಿಸುವ ಅಗತ್ಯವಿದೆ.” ಎಂದರು.
ಇನ್ನೊರ್ವ ಮುಖ್ಯ ಅತಿಥಿಗಳಾದ ಶ್ರೀ ರೋಟರಿ ವಿಜಯ ಕುಮಾರ್ ಜಿ. ಅವರು ಮಾತನಾಡಿ, ” ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ವಿದ್ಯಾರ್ಥಿನಿಯರಲ್ಲಿ ಸಾಧನೆಯ ಹಂಬಲ ಹುಟ್ಟಿಸಲಿ. ವಿವಿಧ ಕ್ಷೇತ್ರಗಳಲ್ಲಿ ಛಲದಿಂದ ಮುನ್ನುಗುವ ಆತ್ಮ ವಿಶ್ವಾಸ ತರಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರದಾದ ಡಾ. ಮಮತಾ ಪಿ.ಆರ್. ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ,” ಸ್ವಂತಿಕೆ, ಸ್ವಾಭಿಮಾನದಿಂದ ಬದುಕುವ ಗುರಿ ಹೆಣ್ಣು ಮಕ್ಕಳದ್ದಾಗಬೇಕು. ಹೆಣ್ಣು ಭ್ರೂಣ ಹತ್ಯೆ ಯಂತಹ ಸಾಮಾಜಿಕ ಅನಿಷ್ಟಗಳು ಮರೆಯದಾಗಲೇ ಹೆಣ್ಣಿನ ವ್ಯಕ್ತಿತ್ವದ ಘನತೆ ಹೆಚ್ಚುತ್ತದೆ ” ಎಂದರು.
Acharya Tulsi National College of Commerce ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ.ನಾಗರಾಜು ಕೆ. ಎಂ, ಪ್ರೊ. ಜಗದೀಶ ಎಸ್. ಉಪಸ್ಥಿತರಿದ್ದರು.