Youth Hostels Association of India ಸಾಹಸ ಚಟುವಟಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸದ ಜತೆಯಲ್ಲಿ ದೈಹಿಕ, ಮಾನಸಿಕ ಸದೃಢತೆ ಹೆಚ್ಚಾಗುತ್ತದೆ. ಎಂತಹ ಕಷ್ಟದ ಸಮಯದಲ್ಲಿಯೂ ನಿಭಾಯಿಸುವ ಶಕ್ತಿ ಬೆಳೆಯುತ್ತದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಮೈಗೂಡಿಸಿ ಎಂದು ಯೂತ್ ಹಾಸ್ಟೆಲ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕಲ್ಲೂರು ಕಲ್ಲುಬಂಡೆ ಬೆಟ್ಟದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶಿಲಾರೋಹಣ ಕಾರ್ಯಕ್ರಮವನ್ನು ಬೆಟ್ಟ ಹತ್ತುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಲಾರೋಹಣ ( ರಾಕ್ ಕ್ಲೈಂಬಿಂಗ್ ) ಚಟುವಟಿಕೆಯಿಂದ ತುರ್ತು ಘಟನೆಗಳಲ್ಲಿ ಪರಿಸ್ಥಿತಿ ನಿಭಾಯಿಸುವ ಸಾಮಾರ್ಥ್ಯ ದೊರಕುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್‌ನ ಡಾ. ದೊರೆ ಚಿನ್ನಪ್ಪ ಮಾತನಾಡಿ, ಮಕ್ಕಳು ಟಿವಿ ಮೋಹದಿಂದ ಹೊರಬಂದು ಇಂತಹ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಧೈರ್ಯದ ಜತೆಯಲ್ಲಿ ವಿಶೇಷ ಅನುಭವ ನಮ್ಮದಾಗುತ್ತದೆ ಎಂದರು.
ತರಬೇತಿ ಶಿಬಿರದಲ್ಲಿ ರಾಕ್ ಕ್ಲೈಂಬಿಂಗ್ ಕುರಿತು ಬೆಂಗಳೂರಿನಿಂದ ಆಗಮಿಸಿದ್ದ ವಿಶೇಷ ಪರಿಣಿತರು ಮಾಹಿತಿ, ದೈಹಿಕ ಕಸರತ್ತು ಹಾಗೂ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
50ಕ್ಕೂ ಹೆಚ್ಚು ಯುವಜನರು ಪಾಲ್ಗೊಂಡಿದ್ದರು.
ಯೂತ್ ಹಾಸ್ಟೆಲ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್ ವಹಿಸಿ ಮಾತನಾಡಿ, ನಮ್ಮ ಘಟಕದ ವತಿಯಿಂದ ನಿರಂತರ ಚಾರಣ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಸಾಹಸ ಚಟುವಟಿಕೆಗಳನ್ನು ಹೆಚ್ಚು ಆಯೋಜಿಸಲಾಗುವುದು ಎಂದರು.
Youth Hostels Association of India ಚೇರ‍್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್, ಬದರೀನಾಥ್, ನವೀನ್ ಪಂಡಿತ್, ನವೀನ್ ಜವಳಿ, ಮಂಜುನಾಥ್, ನಾಗರಾಜ್, ಮಹೇಶ್, ಡಾ. ರಂಜನಿ ಬಿದರಳ್ಳಿ, ರಾಘವೇಂದ್ರ, ಪ್ರಕಾಶ್, ನವೀನ್.ಡಿ.ಸಿ. ಮತ್ತಿತರರು ಉಪಸ್ಥಿತರಿದ್ದರು.