Sahyadri Commerce and Management College ಇಂದು ನಾವು ರಚಿಸುವ ಕಾವ್ಯ ಕೇವಲ ರಚನೆ ಮಾತ್ರ. ಆ ರಚನಾ ಕೌಶಲಗಳು ಪ್ರತಿಯೊಬ್ಬರಿಗೂ ಭಿನ್ನಭಿನ್ನವಾಗಿರುತ್ತದೆ. ಅಭಿವ್ಯಕ್ತಿಗೆ ಸ್ವಂತಿಕೆಯ ತಾಜಾತನವನ್ನು ಸೇರಿಸುವುದೇ ಕವಿತೆಯ ನಿಜವಾದ ಯಶಸ್ಸು. ಕನ್ನಡ ಕಾವ್ಯ ಪ್ರಪಂಚ ವಿಸ್ತಾರವಾದದು. ಹಳೆಗನ್ನಡದಿಂದ ಹೊಸಗನ್ನಡದವರೆಗೆ ಈ ಪಯಣ ಸುದೀರ್ಘ ಮತ್ತು ನಿರಂತರ. ಎಲ್ಲರಿಗೂ ಒಳಿತನ್ನೇ ಬಯಸುವುದು ಕಾವ್ಯದ ನಿಜವಾದ ಉದ್ದೇಶ. ಯಾವ ಕವಿಯಾಗಲಿ ಕಾವ್ಯವಾಗಲಿ ಹಿಂಸೆ, ಕೊಲೆಗಳಿಗೆ ಪ್ರೇರಣೆಯನ್ನು ನೀಡಲು ಸಾಧ್ಯವಿಲ್ಲ. ಯುದ್ಧ ರಕ್ತಪಾತಗಳಿಲ್ಲದೆ ಸಮಾಜವನ್ನು ಸಮಾನತೆಯ ಕಡೆಗೆ ಕೊಂಡೊಯ್ಯಲು ಕವಿತೆ ಬಯಸುತ್ತದೆ. ಹಾಗಾಗಿ ಕೇಡು ಸೇಡುಗಳಿಂದ ಮುಕ್ತವಾಗಿರುವುದೇ ಕಾವ್ಯ” ಎಂದು ಖ್ಯಾತ ಕವಯತ್ರಿ ಶ್ರೀಮತಿ ಸವಿತಾ ನಾಗಭೂಷಣ್ ಅವರು ಅಭಿಪ್ರಾಯಪಟ್ಟರು.
ಅವರು ಶಿವಮೊಗ್ಗ ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ನುಡಿಮಂಟಪ ವೇದಿಕೆಯ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ “ಕರ್ನಾಟಕ 50 ಹೆಸರು -ಉಸಿರು” ಎಂಬ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ” ಕನ್ನಡ ನಮ್ಮ ಪ್ರೀತಿಯ ಭಾಷೆ. ಅದನ್ನು ಕಲಿಯಲು ನಾವು ಯಾವುದೇ ಶ್ರಮವನ್ನು ಪಡಬೇಕಾಗಿಲ್ಲ. ಯಾವುದು ಹುಟ್ಟಿನಿಂದ ಯಾವುದೇ ಪರಿಶ್ರಮವಿಲ್ಲದೆ ಕಲಿಯುತ್ತೇವೆಯೋ ಅದೆ ನಮ್ಮ ತಾಯಿ ಭಾಷೆಯಾಗಿದೆ. ಕರ್ನಾಟಕ – ಕನ್ನಡ ನಾಡು ನುಡಿಗೆ ನಾವು ಎಂದಿಗೂ ಕೃತಜ್ಞರಾಗಿರಬೇಕು. ” ಎಂದರು.
Sahyadri Commerce and Management College ಪ್ರಾಚಾರ್ಯರಾದ ಡಾ ಎಂ ಕೆ ವೀಣಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ,” ಕಾವ್ಯ ಎನ್ನುವುದು ಭಾವ ಮತ್ತು ಭಾಷೆಗಳ ಒಂದು ಸುಂದರ ಅಭಿವ್ಯಕ್ತಿ. ಸತ್ವಪೂರ್ಣ ಮನಸ್ಸುಗಳಿಂದ ಮಾತ್ರ ತಮ್ಮ ಕಾವ್ಯ ಹುಟ್ಟಲು ಸಾಧ್ಯ. ಕನ್ನಡದ ಕಾವ್ಯ ಪರಂಪರೆಯ ಹಿರಿಯರನ್ನು ಅವರ ಸಾಧನೆಯ ಮೂಲಕ ಪರಿಚಯಿಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ ಪ್ರೀತಿ ಯಾವಾಗಲೂ ನಮ್ಮ ಜೊತೆಯಾಗಿರಬೇಕು. ಸಾಹಿತ್ಯವು ನಮ್ಮ ದೈನಂದಿನ ಬದುಕಿನ ಭಾಗವಾದಾಗ ನಾವು ಹಲವು ಒತ್ತಡಗಳಿಂದ ಮುಕ್ತರಾಗಲು ಸಾಧ್ಯ. ಸಾಹಿತ್ಯವು ಚಿಂತನೆಯನ್ನು ಚುರುಕುಗೊಳಿಸುತ್ತದೆ. ಹೊಸ ಪದಗಳ ಪರಿಚಯವಾದಾಗ ಹೊಸ ಅರ್ಥ ಸಾಧ್ಯತೆಯು ಕವಿಗೆ ಒದಗಿ ಬರುತ್ತದೆ. ” ಎಂದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜುಗಳಿಂದ ಬಂದ ಸುಮಾರು 25 ಕವಿಗಳು ಕಾವ್ಯವಾಚನ ಮಾಡಿದರು.
ಶ್ರೀಮತಿ ಪದ್ಮಾಕ್ಷಿ ಹಾಗೂ ಶ್ರೀಮತಿ ಮಮತಾ ನವೀನ್ ತೀರ್ಪುಗಾರರಾಗಿ ಆಗಮಿಸಿದ್ದರು. ಉಪನ್ಯಾಸಕರಾದ ಡಾ ದೊಡ್ಡ ನಾಯಕ್, ಡಾ.ರಾಜೀವ ನಾಯಕ್, ಸಂಶೋಧನಾ ವಿದ್ಯಾರ್ಥಿ ಶ್ರೀ ಗಿರೀಶ್ ನಾಯಕ್ ಕ್ರಮದಲ್ಲಿ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ಡಾ.ಶುಭಾ ಮರವಂತೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮನೋಜ್ ಎಲ ವಂದಿಸಿದರು.