Sri Ramakrishna Vidyaniketan School ಮಾನವೀಯ ಮೌಲ್ಯಗಳು ಮುಂದಿನ ಸಮಾಜಕ್ಕೆ ಅತಿ ಅವಶ್ಯಕ. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಹಾಗೂ ಹಿರಿಯರು, ತಂದೆ-ತಾಯಿಯರನ್ನು ಗೌರವಿಸುವಂತಹ ತಿಳುವಳಿಕೆ ನೀಡುವುದು ಅತಿ ಮುಖ್ಯವಾಗಿದೆ ಎಂದು ರಾಣೆಬೆನ್ನೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಪ್ರಕಾಶನಂದ ಜೀ ಮಹಾರಾಜ್ ತಿಳಿಸಿದರು.
ಅವರು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ, ಚಿಣ್ಣರ ಚಿಲುಮೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಾ, ಮಕ್ಕಳಿಗೆ ಪೋಷಕರು ವೈದ್ಯನಾಗು, ಇಂಜಿನಿಯರಿಂಗ್ ಆಗು ಎಂದು ಒಂದೇ ವಿಷಯದ ಮೇಲೆ ಒತ್ತಡ ಹಾಕಬೇಡಿ. ಮಕ್ಕಳ ಅಭಿರುಚಿಗೆ ತಕ್ಕಂತೆ ಬೆಳೆಯಲು ಅವಕಾಶ ನೀಡಿ. ಉತ್ತಮ ಪ್ರಜೆಯನ್ನಾಗಿ ರೂಪಿಸಿ ಎಂದು ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದರ ಘೋಷಣೆಯಂತೆ ಜ್ಞಾನಾರ್ಜನೆಯೇ ಶಿಕ್ಷಣವಲ್ಲ. ಕಲಿತ ಜ್ಞಾನವನ್ನು ತನ್ನ ಹಾಗೂ ಸಮಾಜದ ಅಭ್ಯುದಯಕ್ಕೆ ಹೇಗೆ ಬಳಸಿಕೊಳ್ಳಬೇಕು. ಸುಂದರ ದೇಶವನ್ನು ಹೇಗೆ ಕಟ್ಟಬೇಕು ಎನ್ನುವುದನ್ನು ಮಕ್ಕಳು ಕಲಿಯಬೇಕು. ದೇಶ ಕಟ್ಟುವ ಕೆಲಸವೆಂದರೆ ತಾವು ಮಾಡುವ ಕೆಲಸಗಳಲ್ಲಿ ಪ್ರಮಾಣೀಕತೆಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮನದಲ್ಲಿ ನೈತಿಕ ಮೌಲ್ಯಗಳನ್ನು ಕ್ರೂಢಿಕರಿಸಬೇಕು ಎಂದರು.
ಮಕ್ಕಳ ಬದಲಾವಣೆಯನ್ನು ಗಮನಿಸಲು ಎಸ್‌ಪಿ ಕರೆ
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಸಮಾಜದಲ್ಲಿ ಹೆಚ್ಚು ಮಕ್ಕಳು ಬೇರೆ ಬೇರೆ ಆಮಿಷಗಳಿಗೆ ಒಳಗಾಗುತ್ತಿದ್ದಾರೆ. ಪೋಷಕರು ಹಾಗೂ ಶಿಕ್ಷಕರು ಪ್ರತಿ ಮಕ್ಕಳ ನಡವಳಿಕೆಯನ್ನು ಗಮನಿಸಬೇಕು. ಮಕ್ಕಳು ತಪ್ಪು ಮಾಡಿದರೆ ಆದು ಆ ಕ್ಷಣಕ್ಕೆ ಮಾಡಿದ ತಪ್ಪಲ್ಲ. ಪೂರ್ವದಿಂದಲೇ ಆ ಕೆಲಸಕ್ಕೆ ಕೈ ಹಾಕಿರುತ್ತದೆ. ಅದನ್ನು ಗಮನಿಸುವ ಮೂಲಕ ಆರಂಭದಲ್ಲೇ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿ ತಿದ್ದುವ ಕೆಲಸ ಮಾಡಬೇಕಿದೆ ಎಂದರು.
ಇಂದು ಮಕ್ಕಳು ಹೊಂದುವ ಗೆಳೆತನದ ಬಗ್ಗೆ ಯೋಚಿಸುವಂತೆ ತಿಳಿಹೇಳ ಬೇಕಿದೆ. ಒಳ್ಳೆಯವರ ಗೆಳೆತನ ಸಾಕಷ್ಟು ಒಳ್ಳೆದನ್ನು ನೀಡಿದರೆ ದುಷ್ಟ ಮನಸ್ಸುಗಳ ಗೆಳೆತನ ಸಮಾಜ ವ್ಯವಸ್ಥೆಯನ್ನೇ ಅಲ್ಲೊಲ-ಕಲ್ಲೋಲ ಮಾಡುತ್ತದೆ. ಅದನ್ನು ಮಕ್ಕಳ ಮನದಲ್ಲಿ ಉದಾಹರಣೆಗಳ ಮೂಲಕ ಬಿಂಬಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ ಎಂದರು.
Sri Ramakrishna Vidyaniketan School ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾನಿಕೇತನ ಅಧ್ಯಕ್ಷ ಡಾ.ಡಿ.ಆರ್.ನಾಗೇಶ್ ವಹಿಸಿದ್ದು, ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯ ಶಿಕ್ಷಕ ತೀರ್ಥೆಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಮುಖರಾದ ಡಿ.ಆರ್.ದೇವರಾಜ್ ಅವರು ಪ್ರಸ್ತಾವಿಕವಾಗಿ ಕಾಮಕೃಷ್ಣ ಶಾಲೆಯ ಯಶಸ್ಸಿನ ಬಗ್ಗೆ ವಿವರಣೆ ನೀಡಿದರು.