Shivamogga McGann Hospital ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದಲ್ಲಿ ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿರುವ ಹಾಗೂ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ(ರಪ್ಚರಡ್ ಎಕ್ಟೋಪಿಕ್)ಯನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ನಡೆಸಿ ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಹಳೆ ಜೋಗದ ವೀರಭದ್ರಪ್ಪನವರ ಪತ್ನಿ 31 ವರ್ಷದ ಬೇಬಿ ಎಂಬುವವರು ನ.12 ರಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗಕ್ಕೆ ಹೊಟ್ಟೆ ನೋವಿಗಾಗಿ ಬಂದು ತೋರಿಸಿದ್ದು ಪರೀಕ್ಷೆ ನಡೆಸಿದಾಗ ಅವರು ಒಂದೂವರೆ ತಿಂಗಳ ಗರ್ಭಿಣಿಯಾಗಿರುವುದು ಕಂಡು ಬಂದಿರುತ್ತದೆ. ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ ಧರಿಸಿರುವುದು ಅಂದರೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದು ತಿಳಿದು ಬಂದಿರುತ್ತದೆ.
ಇವರು ಆಸ್ಪತ್ರೆಗೆ ಬಂಧಾಗ ತೀವ್ರ ತರಹದ ಆಘಾತಕ್ಕೊಳಗಾಗಿದ್ದು ಅವರ ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆಗಳನ್ನು ನಡೆಸಿದಾಗ ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ಬಿಪಿ 80/50 ಇದ್ದು ಉಸಿರಾಟದ ತೊಂದರೆಯಿಂದ ಬಳಲುತ್ತಾ ಅರೆಪ್ರಜ್ಞಾವಸ್ಥೆಯಲ್ಲಿ ಇರುತ್ತಾರೆ. ಸ್ಕ್ಯಾನಿಂಗ್‍ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು(ರಪ್ಚರಡ್ ಎಕ್ಟೋಪಿಕ್) ಕಂಡು ಬಂದಿರುತ್ತದೆ.
ತಕ್ಷಣ ಗರ್ಭಿಣಿಯನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಿ ಅವರ ರಕ್ತ ಪರೀಕ್ಷಿಸಿದಾಗ ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದ ‘ಬಾಂಬೆ ಬ್ಲಡ್ ಗ್ರೂಪ್’ ಅವರಿಗೆ ಇರುವುದು ಖಚಿತಗೊಂಡಿರುತ್ತದೆ. ಆಕೆಗೆ ಅತಿ ಅವಶ್ಯಕವಾಗಿ 4 ರಿಂದ 5 ಯುನಿಟ್‍ಗಳಷ್ಟು ರಕ್ತದ ಅವಶ್ಯಕತೆ ಕಂಡು ಬಂದಿರುತ್ತದೆ. ಇಲ್ಲವಾದಲ್ಲಿ ಆಕೆ ತೊಂದರೆಗೆ ಒಳಗಾಗುವ ಸಂದರ್ಭವಿತ್ತು.
ಆ ಸಮಯದಲ್ಲಿ ವೈದ್ಯರುಗಳ ಸಮಯ ಪ್ರಜ್ಞೆಯಿಂದ ಡಾ.ಲೇಪಾಕ್ಷಿ ಬಿ.ಜಿ ಮತ್ತು ಡಾ.ಅಶ್ವಿನಿ ವೀರೇಶ್ ತಂಡದ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿದ್ದನಗೌಡ ಪಿ ಇವರ ಮಾರ್ಗದರ್ಶನದಲ್ಲಿ ಈ ಅತೀ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಗರ್ಭಿಣಿ ಸ್ತ್ರೀಗೆ ನೀಡುವಲ್ಲಿ ರಕ್ತನಿಧಿ ಕೇಂದ್ರದ ವೈದ್ಯೆ ಡಾ.ವೀಣಾ ಮತ್ತು ತಂಡವರು ಶ್ರಮಿಸಿರುತ್ತಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು, ದಾವಣಗೆರೆ ಜಿಲ್ಲೆಯ ಮಾಯಕೊಂಡದಿಂದ ಇಬ್ಬರು ರಕ್ತದಾನಿಗಳು ಹಾಗೂ ಸಂಕಲ್ಪ ಫೌಂಡೇಷನ್, ಬೆಂಗಳೂರು ಇವರ ಸಹಾಯದಿಂದ ಮತ್ತೊಂದು ಯುನಿಟ್‍ನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಮದ ಸಂಗ್ರಹಿಸಿ, ಪರೀಕ್ಷಿಸಿ ಗರ್ಭಿಣಿಗೆ ನೀಡಲಾಗುತ್ತದೆ.
ಗರ್ಭಿಣಿಗೆ ತಕ್ಷಣ ಶಸ್ತ್ರಚಿಕಿತ್ಸೆ ಅವಶ್ಯಕತೆ, ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿ ಅರವಳಿಕೆ ತಜ್ಞ ವೈದ್ಯರಾದ ಡಾ.ಶಿವಾನಂದ ಪಿ.ಟಿ ಮತ್ತು ತಂಡದವರಿಂದ ಸಹಾಯ ಪಡೆದು ಯಶಸ್ವಿ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯನ್ನು ಮೃತ್ಯುಕೂಪದಿಂದ ಹೊರತಂದ ಕೀರ್ತಿ ಎಲ್ಲ ವೈದ್ಯ ತಂಡಕ್ಕೆ ಸಲ್ಲುತ್ತದೆ.
Shivamogga McGann Hospital ಈ ಶಸ್ತ್ರಚಿಕಿತ್ಸೆಗೆ ಅತಿ ವಿರಳ ಗುಂಪಿನ ರಕ್ತದಾನವನ್ನು ಮಾಡಿ ಜೀವ ಉಳಿಸಿದ ಮಾಯಕೊಂಡದ ಪ್ರವೀಣ್ ಜಿ, ಕೊಟ್ಟೂರಿನ ಸಿದ್ದೇಶ್, ಸಂಕಲ್ಪ ಫೌಂಡೇಶನ್, ಬೆಂಗಳೂರು ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರ ಇವರುಗಳಿಗೆ ಸಂಸ್ಥೆ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ ತಿಳಿಸಿರುತ್ತಾರೆ. ಹಾಗೂ ಅತಿ ವಿರಳ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪ್ ಬಗ್ಗೆ ಅರಿವು ಮತ್ತು ಅದರ ದಾನಿಗಳನ್ನು ಪತ್ತೆ ಹಚ್ಚಲು ಸಹಕರಿಸಬೇಕೆಂದು ಕೋರಿದ್ದಾರೆ.