Karnataka Public Service Commission ರಾಜ್ಯ ಲೋಕಸೇವಾ ಆಯೋಗವು 2023ರ ನವೆಂಬರ್ 5ರಂದು ಒಂದೇ ದಿನ ಮೂರು ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಗೊಳಿಸಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದ್ದು, ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಸೂಚನೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Karnataka Public Service Commission ಕಳೆದ ಐದು ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗದೇ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಹಾಗೂ ವಯೋಮಿತಿಗೆ ಸೂಕ್ತವಾದ ಉದ್ಯೋಗ ಸಿಗದೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಸರ್ಕಾರಿ ಉದ್ಯೋಗಕ್ಕೆ ಸೇರಲು ಬಯಸಿ ಅರ್ಜಿ ಆಹ್ವಾನಿಸಲಾಗಿರುವ ಪ್ರತಿಯೊಂದು ನೇಮಕಾತಿಗಳಿಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ದೀರ್ಘ ಕಾಲದಿಂದ ತಯಾರಿ ನಡೆಸಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸಚಿವರು ಹೇಳಿದ್ದಾರೆ. ಲಕ್ಷಾಂತರ ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೋರಿದ್ದಾರೆ.