Karnataka Rajyotsava ವಿಶ್ವದ ಅನ್ಯ ರಾಷ್ಟ್ರಗಳ ಎಲ್ಲ ಸಮಸ್ಯೆ, ಸಂಧಿಗ್ಧಗಳಿಗೆ ಭಾರತದ ಅಧ್ಯಾತ್ಮದಲ್ಲಿ ಪರಿಹಾರವಿದೆ, ಇದೇ ಭಾರತದ ಸಂಸ್ಕೃತಿ ಮತ್ತು ಸಂಸ್ಕಾರಗಳ ಹಿರಿಮೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು. ಅವರು ಹೊನ್ನಾಳಿಯ ಹಿರೇ ಕಲ್ಮಠದಲ್ಲಿ ಏರ್ಪಾಡಾಗಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ ಮತ್ತು ಸಂಸ್ಕಾರ’ ಎಂಬ ವಿಷಯವಾಗಿ ಪ್ರಧಾನ ಉಪನ್ಯಾಸ ನೀಡುತ್ತಾ ದೇಶದಲ್ಲಿ 6,400ಕ್ಕೂ ಹೆಚ್ಚು ಜಾತಿಗಳು, 1928 ಕ್ಕೂ ಹೆಚ್ಚು ವಿವಿಧ ಭಾಷೆಗಳು 6 ಕ್ಕೂ ಹೆಚ್ಚು ಮತಗಳು ಇದ್ದರೂ ಭಾರತವು ಒಂದಾಗಿರುವುದು ಅದರ ಸಂಸ್ಕೃತಿ ಮತ್ತು ಸಂಸ್ಕಾರದಿಂದಾಗಿ, ಇದನ್ನು ಇಡೀ ವಿಶ್ವವೇ ಬೆರಗು ಕಣ್ಣಿಂದ ನೋಡುತ್ತಿದೆ, ಇಂತಹ ಅಮೂಲ್ಯವಾದ ಭಾರತೀಯ ಸಂಸ್ಕೃತಿಗೆ ಜಾತಿ ಮತಗಳ ಭೇದವಿಲ್ಲ, ಸಂಸ್ಕೃತಿಯು ಶಾಲಾ ಕಾಲೇಜು ಪಾಠಗಳಿಂದ ಬರುವುದಲ್ಲ, ಇದನ್ನು ಮನೆಯಲ್ಲಿ ಮಕ್ಕಳಿಗೆ ಪೋಷಕರು ಸಂಸ್ಕಾರದಿಂದ ಕೊಡಬೇಕು, ಆಧ್ಯಾತ್ಮಿಕ ಕೇಂದ್ರಗಳು ಮಠಮಾನ್ಯಗಳು ಏರ್ಪಡಿಸುವ ಇಂತಹ ಪುರಾಣ ಪ್ರವಚನಾದಿ ಉಪನ್ಯಾಸಗಳಿಂದಲೂ ಸಂಸ್ಕಾರಯುತ ಸಂಸ್ಕೃತಿಯ ಚಿಂತನೆಗಳನ್ನು ಪಡೆದು ಸುಸಂಸ್ಕೃತರಾಗಲು ಸಾಧ್ಯ ಎಂಬುದನ್ನು ಎಚ್.ಬಿ. ಮಂಜುನಾಥ್ ಸ್ವಾರಸ್ಯಕರ ಉದಾಹರಣೆಗಳ ಮೂಲಕ ವಿವರಿಸಿದರು.
Karnataka Rajyotsava ಮನುಷ್ಯನನ್ನು ಕಾಡುವ ಭಯ ಶೋಕ ಮೋಹಗಳನ್ನು ಆಧುನಿಕ ಸಾಧನ ಸವಲತ್ತುಗಳು ಹೆಚ್ಚಿಸುತ್ತಿವೆಯೇ ಹೊರತು ನಿವಾರಿಸುತ್ತಿಲ್ಲ, ಸನಾತನವಾದ ಸಾತ್ವಿಕ ಜೀವನವೇ ಇದಕ್ಕೆ ಪರಿಹಾರವಾಗ ಬಲ್ಲದು, ಸಾತ್ವಿಕ ಜೀವನವೆಂದರೆ ಹೇಡಿತನವಲ್ಲ, ನಿರುತ್ಸಾಹವೂ ಅಲ್ಲ, ಯುಕ್ತಾಯುಕ್ತತೆಗಳನ್ನು ಸತ್ಯಾಸತ್ಯೆಗಳನ್ನು ಪರಾಮರ್ಶಿಸಿ ನಿರ್ಣಯ ತೆಗೆದುಕೊಳ್ಳುವುದೇ ಸಾತ್ವಿಕ ಜೀವನದ ಲಕ್ಷಣ ಎಂದು ಮಂಜುನಾಥ ಅಭಿಪ್ರಾಯ ಪಟ್ಟರು. ಹೊನ್ನಾಳಿಯ ಕ್ಷೇತ್ರ ಮಹತ್ವವನ್ನು ವಿವರಿಸುತ್ತಾ ಇದು ಶೈವ ವೈಷ್ಣವ ಭೇದ ಎಣಿಸದ ಪವಿತ್ರ ಸ್ಥಳವೂ ಆಗಿದೆ ಎಂಬುದನ್ನು ನಿದರ್ಶನಗಳ ಸಹಿತ ಚಿತ್ರಿಸಿದರು. ಹೊನ್ನಾಳಿ ಹಿರೇಕಲ್ಮಠದ ಷ.ಬ್ರ.ಡಾ. ಪೂಜ್ಯಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವ ಹಾಗೂ ಕೋಣಂದೂರು ಪುರ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು.