Saturday, November 23, 2024
Saturday, November 23, 2024

Kaveri Issue ಕರ್ನಾಟಕಕ್ಕೆ ಬೆಂಬಿಡದ ಕಾವೇರಿ ಸಮಸ್ಯೆ

Date:

Kaveri Issue ಕಾವೇರಿ ಕನ್ನಡ ನಾಡಿನ ಜೀವನದಿ. ಕೋಟ್ಯಾಂತರ ಜನರ ಪಾಲಿನ ಜೀವ ಜಲ. ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಭಾಗಮಂಡಲದ ತಲಕಾವೇರಿ ಜೀವನದಿಯ ಉಗಮ ಸ್ಥಾನ. ಅಲ್ಲಿ ಹುಟ್ಟಿ ದೂರದ ಬಂಗಾಳ ಕೊಲ್ಲಿ ಸಮುದ್ರ ಸೇರುವವರೆಗೂ ಸಕಲ ಜೀವರಾಶಿಗಳ ಪಾಲಿಗೆ ಕಾವೇರಿ ಜೀವದಾತೆಯಾಗಿದ್ದಾಳೆ.

ಕಾವೇರಿಗೆ ಅನೇಕ ಉಪನದಿಗಳು ಸೇರುತ್ತವೆ. ಅದರಲ್ಲಿ ಪ್ರಮುಖವಾದವು ಕಬಿನಿ, ಹಾರಂಗಿ, ಸುವರ್ಣವತಿ, ಹೇಮಾವತಿ, ಲಕ್ಷ್ಮಣತೀರ್ಥ ಅರ್ಕಾವತಿ. ಇನ್ನು ಕಾವೇರಿ ಕೇವಲ ಕರ್ನಾಟಕದ ಪಾಲಿನ ಜೀವನದಿಯಲ್ಲ. ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ ರಾಜ್ಯಗಳಿಗೂ ಕಾವೇರಿಯೇ ಜೀವಧಾತೆ.

ಇದೇ ಕಾರಣಕ್ಕೆ ಈಕೆಯನ್ನು ಕಾವೇರಿ ಮಾತೆ ಅಂತಾ ಪೂಜಿಸುತ್ತಾರೆ.

ಕಾವೇರಿ ಉಗಮ ಸ್ಥಾನ ಕರ್ನಾಟಕ. ಸಾಗುವ ಮನೆ ಕೇರಳ. ಸೇರುವ ಮನೆ ತಮಿಳುನಾಡು. ಈ ರಾಜ್ಯಗಳ ಸಕಲ ಜೀವರಾಶಿಗಳಿಗೂ ನೀರುಣಿಸಿ ಬಾಳು ಬೆಳಕಾಗಿಸಿದ್ದಾಳೆ. ಕಾವೇರಿ ನದಿ ಸರಿ ಸುಮಾರು 800 ಕಿಲೋ ಮೀಟರ್ ಹರಿಯುತ್ತದೆ .ಇದರಲ್ಲಿ ಕರ್ನಾಟಕದಲ್ಲಿ ಸುಮಾರು 325 ಕಿಲೋ ಮೀಟರ್ ಹಾಗೂ ತಮಿಳುನಾಡಿನಲ್ಲಿ 415 ಕಿಲೋ ಮೀಟರ್ ಹರಿದರೆ ಗಡಿ ಭಾಗದಲ್ಲಿ 63 ಕಿಲೋ ಮೀಟರ್ ಹರಿಯುತ್ತದೆ.

ಕಾವೇರಿ ವಿವಾದ ಶುರುವಾಗಿದ್ದು ಯಾವಾಗ ಅನ್ನೋದಾದ್ರೆ?

ಕಾವೇರಿ ನೀರು ಹಂಚಿಕೆ ವಿವಾದ ಇಂದು ನೆನ್ನೆಯದಲ್ಲ. ಇದು ಬ್ರಿಟಿಷರ ಕಾಲದಲ್ಲಿ ಆರಂಭವಾಗಿದ್ದು. ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸ್ ಹಾಗೂ ಮೈಸೂರು ರಾಜ್ಯ ನಡುವೆ ಇದ್ದ ವಿವಾದ ಇಂದು‌ ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

1892ರಲ್ಲಿ ಮೊದಲ ಬಾರಿಗೆ ಈ ವಿವಾದದ ಕಿಡಿ ಹೊತ್ತಿಕೊಂಡಿತು. ಕಾವೇರಿ ನದಿ ಅಂದಿನ ಮೈಸೂರು ರಾಜ್ಯ ಹಾಗೂ ಮದ್ರಾಸ್ ರಾಜ್ಯದ ನಡುವೆ ಹರಿಯುತಿತ್ತು. ಇದೇ ಕಾರಣಕ್ಕೆ ಕಾವೇರಿ ನದಿ ಭಾಗದಲ್ಲಿ ಯಾವುದೇ ಜಲಾಶಯ ನಿರ್ಮಾಣ ಅಥವಾ ಬೇರೆ ಏನೇ ಮಾಡುವುದಿದ್ದರೂ ಅದರ ಸಂಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ನೀಡಬೇಕು ಹಾಗೂ ಮದ್ರಾಸ್ ಸರ್ಕಾರದ ಅನುಮತಿ ಪಡೆಯಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಯಿತು.

Kaveri Issue ಇನ್ನು ಆಗ ಮದ್ರಾಸ್ ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಮೈಸೂರು ರಾಜ್ಯ ಬ್ರಿಟಿಷ್ ಸರ್ಕಾರದ ಅಧೀನದಲ್ಲಿತ್ತು. ಹೀಗಾಗಿ ಮೈಸೂರು ರಾಜ್ಯ ಒಪ್ಪಂದ ವಿರೋಧಿಸುವ ಸ್ಥಿತಿಯಲ್ಲಿ ಇರಲಿಲ್ಲ.

1910ರಲ್ಲಿ ಮೈಸೂರು ರಾಜ್ಯದ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಕಟ್ಟೆ ಕಟ್ಟುವ ಯೋಜನೆ ರೂಪಿಸಿತು‌. 1892ರ ಒಪ್ಪಂದಕ್ಕೆ ಬದ್ದವಾಗಿ ಮದ್ರಾಸ್ ಸರ್ಕಾರಕ್ಕೆ ಇದರ ಸಂಪೂರ್ಣ ಮಾಹಿತಿ ನೀಡಿ ಅದರ ಒಪ್ಪಿಗೆ ಕೋರಿತು. ಆದರೆ ಮದ್ರಾಸ್ ಸರ್ಕಾರ ಈ ಯೋಜನೆಗೆ ಅನುಮತಿ ನೀಡಲಿಲ್ಲ. ಪಟ್ಟು ಬಿಡದ ಮೈಸೂರು ರಾಜ್ಯ ಸರ್ಕಾರ ಅಣೆಕಟ್ಟಿನ ಅವಶ್ಯಕತೆ ಏನು? ಯಾವ ಕಾರಣಕ್ಕೆ ಇದನ್ನು ಮಾಡಲಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಆದರೂ ಮದ್ರಾಸ್ ಸರ್ಕಾರ ಒಪ್ಪದ ಹಿನ್ನೆಲೆ ಒಬ್ಬ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಮತ್ತೊಂದು ಒಪ್ಪಂದದ ಕರಾರಿನ ಮೇಲೆ ಮದ್ರಾಸ್ ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ಷರತ್ತುಬದ್ದ ಒಪ್ಪಿಗೆ ನೀಡಿತು.

ಮದ್ರಾಸ್ ಸರ್ಕಾರದ ಪ್ರಮುಖ ಷರತ್ತು ಅಣೆಕಟ್ಟಿನಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿತ್ತು. ಮದ್ರಾಸ್ ನೇರ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಕಾರಣ ತಮಿಳುನಾಡಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಪ್ಪಂದ ಏರ್ಪಟ್ಟಿತು.
ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಕಾವೇರಿ ವಿವಾದ ಅಷ್ಟಾಗಿ ತಲೆದೋರಲಿಲ್ಲ. ಇದಕ್ಕೆ ಪ್ರಕೃತಿಯ ಸಹಕಾರ ಸಹಾ ಇತ್ತು. ಆದರೆ ಸ್ವಾತಂತ್ರ್ಯ ಬಂದು ರಾಜ್ಯಗಳ ಪುನರ್ವಿಂಗಡಣೆಯಾದ ನಂತರ ಈ ಒಪ್ಪಂದ‌ ಕಾಲಕ್ಕೆ ತಕ್ಕಂತೆ ಮಾರ್ಪಾಡಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಬದಲಿಗೆ 1972ರಲ್ಲಿ ಕೇಂದ್ರ ಸರ್ಕಾರ ಕಾವೇರಿ ಸತ್ಯಶೋಧನಾ ಸಮತಿಯನ್ನು ರಚನೆ ಮಾಡಿ ಕಾವೇರಿ ನದಿ ನೀರು ಹಂಚಿಕೆಯ ಸಂಪೂರ್ಣ ವರದಿ ನೀಡುವಂತೆ ಸೂಚಿಸಿತು. ಸಮಿತಿಯು ವರದಿ ನೀಡಿದಾಗ ತಮಿಳುನಾಡು ಸ್ವಾತಂತ್ರ್ಯಪೂರ್ವದ ಒಪ್ಪಂದವನ್ನು ಪಾಲಿಸದೇ ಇರುವುದು ಬಹಿರಂಗವಾಗಿತ್ತು.

ಆದರೂ ತಮಿಳುನಾಡು ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುವುದನ್ನು ನಿಲ್ಲಿಸಲಿಲ್ಲ. ಕರ್ನಾಟಕ ಸರ್ಕಾರದ ಯೋಜನೆಗಳಿಂದ ತಮಿಳುನಾಡಿನ ರೈತರಿಗೆ ಅನ್ಯಾಯವಾಗುತ್ತಿದೆ ಅಂತಾ ನ್ಯಾಯಾಲಯದ ಮೊರೆ ಹೋದರು. ತಮಿಳುನಾಡಿನ ರೈತರ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್ 1990ರಲ್ಲಿ ಕರ್ನಾಟಕ ತಮಿಳುನಾಡು ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ನ್ಯಾಯಮಂಡಳಿ ರಚನೆ ನಂತರದ ಬೆಳವಣಿಗೆ
ಸುಪ್ರೀಂಕೋರ್ಟ್ ಸೂಚನೆಯ ಅನ್ವಯ ನ್ಯಾಯಮಂಡಳಿಯನ್ನು ರಚಿಸಲಾಯಿತು. ತಕ್ಷಣ ಕಾರ್ಯ ಆರಂಭಿಸಿದ ನ್ಯಾಯಮಂಡಳಿಯ‌ ಮುಂದೆ ಕರ್ನಾಟಕ, ತಮಿಳುನಾಡು‌ ಹಾಗೂ ಕೇರಳ ರಾಜ್ಯಗಳು ತಮ್ಮ ರಾಜ್ಯಕ್ಕೆ ಅವಶ್ಯಕತೆಯಿರುವ ನೀರಿಗೆ ಬೇಡಿಕೆ ಸಲ್ಲಿಸಿದವು. ಅದರಂತೆ ಕರ್ನಾಟಕ 465 ಟಿಎಂಸಿ ಕೇರಳ 99.8 ಪಾಂಡಿಚೆರಿ 9.03 ಟಿಎಂಸಿ ನೀರಿಗೆ ಬೇಡಿಕೆಯಿಟ್ಟವು. ಇನ್ನು ತಮಿಳುನಾಡು ಪಾಂಡಿಚೆರಿಯ ಪಾಲು ಸೇರಿ ತನಗೆ 566 ಟಿಎಂಸಿ‌ ನೀರು ಬೇಕೆಂದು ಬೇಡಿಕೆ ಸಲ್ಲಿಸಿತು. ಈ ವೇಳೆ ಕಳೆದ 10 ವರ್ಷಗಳ ಮಾಹಿತಿಯನ್ನು ಆಧಾರಿಸಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕೆಂದು ಸೂಚಿಸಿತು.

ಇದರ ಜೊತೆಗೆ ಕರ್ನಾಟಕ ಸದ್ಯ ಇರುವ ಕೃಷಿ ಪ್ರದೇಶದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಾರದು ಎಂದು ಆದೇಶ ನೀಡಿತು.

ಆದರೆ ಕರ್ನಾಟಕ ಇದನ್ನು ಒಪ್ಪಲಿಲ್ಲ. ಆಗ ತಮಿಳುನಾಡು ರಾಷ್ಟ್ರಪತಿಗಳ ಮೊರೆ ಹೋಗಿ, ಸುಪ್ರೀಂಕೋರ್ಟ್ ಕದ ತಟ್ಟಿ ನ್ಯಾಯಮಂಡಳಿ ಆದೇಶವನ್ನು ಕರ್ನಾಟಕ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಕಾವೇರಿ ನದಿ ನೀರು ವಿವಾದ ಉಲ್ಬಣವಾಗುವುದು ಮಳೆಯ ಪ್ರಮಾಣ ಕುಸಿದ ಬರಗಾಲ ಎದುರಾದಾಗ. ಮಳೆ ಪ್ರಮಾಣ ಹೆಚ್ಚಾದರೆ ಅಗತ್ಯಕ್ಕಿಂತ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ತಮಿಳುನಾಡು ಸಹಾ ಹೆಚ್ಚಿನ ನೀರನ್ನು ಬಳಸಿಕೊಳ್ಳಲಾಗದೆ ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ಬಿಟ್ಟು ಬಿಡುತ್ತದೆ. ಹಿಂದೆ 1990ರಲ್ಲಿ ಒಮ್ಮೆ ಬರಗಾಲ ಎದರುರಾಗಿ ಸಮಸ್ಯೆ ಉಲ್ಬಣವಾಗಿತ್ತು.

ತಮಿಳುನಾಡು ಕರ್ನಾಟಕದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ತದನಂತರ 2002ರಲ್ಲಿ ಮತ್ತೆ ಭೀಕರ ಬರಗಾಲ ಬಂದು ಮತ್ತೆ ಹೋರಾಟಗಳು ನಡೆದವು. ಅದರೆ ಏನು ಪ್ರಯೋಜನವಾಗದೆ ಎಲ್ಲಾ ಸಂದರ್ಭದಲ್ಲೂ ಕರ್ನಾಟಕದ ಹಿತಾಸಕ್ತಿಯನ್ನು ಮರೆತು ತಮಿಳುನಾಡಿಗೆ ನೀರು ಹರಿಸಲಾಗಿದೆ.

2007ರಲ್ಲಿ ಕಾವೇರಿ ನ್ಯಾಯಮಂಡಳಿ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ತನ್ನ ತೀರ್ಪು ನೀಡಿತು. ಅದರ ಅನ್ವಯ ತಮಿಳುನಾಡಿಗೆ 419 ಟಿಎಂಸಿ ಕರ್ನಾಟಕಕ್ಕೆ 270 ಟಿಎಂಸಿ ಕೇರಳ ರಾಜ್ಯಕ್ಕೆ 30 ಟಿಎಂಸಿ ಪಾಂಡಿಚೆರಿಗೆ 7 ಟಿಎಂಸಿ ನೀರು ನೀಡಬೇಕೆಂದು ಆದೇಶ ನೀಡಿತು. ಈ ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ವಿರೋಧಿಸಿ ಮೇಲ್ಮನವಿ ಸಲ್ಲಿಸಿತು. ಆದರೆ ಇದುವರೆಗೂ ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ.

ಕಾವೇರಿ ಜಲ ವಿವಾದದಲ್ಲಿ ಮೊದಲಿನಿಂದಲೂ ಅನ್ಯಾಯವಾಗುತ್ತಲೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ರಾಜಕಾರಣ‌. ಹೌದು ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಬಂದ ದಿನದಿಂದಲೂ ಪ್ರಾದೇಶಿಕ ಪಕ್ಷದ್ದೇ ಪಾರುಪತ್ಯ. ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಸದಾ ಕಾಲ ಕೇಂದ್ರದ ಮೇಲೆ‌ ತಮ್ಮ ಹಿಡಿತವನ್ನು ಸಾಧಿಸಿದ್ದವು. ಕೇಂದ್ರ ಸರ್ಕಾರಕ್ಕೂ ಹಲವು ಸಂದರ್ಭಗಳಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹೆಚ್ಚಾಗಿ ಇರುತಿತ್ತು. ಈ ಹಿನ್ನೆಲೆಯಲ್ಲಿ ಅವುಗಳನ್ನು ಓಲೈಸಿಕೊಳ್ಳಲು ಸದಾ ಕಾಲ ಅವರ ಪರವಾಗಿಯೂ ವಾಲುತ್ತಿದ್ದವು.

ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕುಣಿದ ಉದಾಹರಣೆಗಳೇ ಹೆಚ್ಚು. ಮತ್ತೊಂದು ಕಡೆ ರಾಜ್ಯದಲ್ಲಿ ಯಾವಾಗಲೂ ಕೇಂದ್ರವನ್ನು ಗಟ್ಟಿಯಾಗಿ ಎದುರಿಸುವ ಸರ್ಕಾರ ಬರಲೇ ಇಲ್ಲ ಎಂದು ಹೇಳಬಹುದು. ಇದೇ ಕಾರಣಕ್ಕೆ ಕರ್ನಾಟಕದ ಧ್ವನಿ ಕೇಂದ್ರಕ್ಕೆ ತಲುಪಲೇ ಇಲ್ಲ. ಇದು ಈಗಲೂ ಮುಂದುವರಿದಿರುವುದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...