Training Camp ನಮ್ಮ ದೇಶದಲ್ಲಿ ಪ್ರಸ್ತುತ ಸುಮಾರು 15 ಲಕ್ಷ ಶಾಲೆಗಳಲ್ಲಿ ಸರಿ ಸುಮಾರು 96 ಲಕ್ಷದಷ್ಟು ಶಿಕ್ಷಕರಿದ್ದರೂ ಇನ್ನೂ ಸುಮಾರು 10 ಲಕ್ಷದಷ್ಟು ಶಿಕ್ಷಕರ ಅವಶ್ಯಕತೆ ಇದೆ ಎಂದು ಯುನೆಸ್ಕೋ ದ ಸಮೀಕ್ಷೆ ಹೇಳುತ್ತಿದೆ.ಯುವಕ ಯುವತಿಯರು ಪವಿತ್ರವಾದ ಶಿಕ್ಷಕ ವೃತ್ತಿಗೆ ಮುಂದೆ ಬರಬೇಕು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಕರೆಕೊಟ್ಟರು.
ಅವರು ಹರಿಹರ ಶ್ರೀಶೈಲ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಪೌರತ್ವ ತರಬೇತಿ ಶಿಬಿರದ ವಿಶೇಷ ಉಪನ್ಯಾಸಕರಾಗಿ “ಶಿಕ್ಷಕ ವೃತ್ತಿಯಲ್ಲಿ ಆನಂದ ಮತ್ತು ಹಾಸ್ಯ” ಎಂಬ ವಿಷಯವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಿದಾಗ ಶಿಕ್ಷಕರಿಗೆ ಸಂತೋಷವಾಗುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳಾದಾಗ ಆನಂದವಾಗುತ್ತದೆ, ಸಂತೋಷವು ದೇಹ ಮತ್ತು ಮನಸ್ಸಿಗೆ ಆಗುವ ಅನುಭವವಾದರೆ ಆನಂದವು ಬುದ್ಧಿ ಮತ್ತು ಆತ್ಮಕ್ಕೆ ಆಗುವ ಅನುಭವ, ‘ಆನಂದ’ ಎಂಬ ಪದಕ್ಕೆ ವಿರೋಧ ಪದವೇ ಇಲ್ಲ, ಭಾವಿ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ತಮ್ಮ ವಿದ್ಯಾರ್ಥಿಗಳನ್ನು ಶಾಲಾ ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿದರೆ ಸಾಲದು, ಜೀವನ ಪರೀಕ್ಷೆಯನ್ನೂ ಯಶಸ್ವಿಯಾಗಿ ನಿಭಾಯಿಸುವ ಸತ್ಪ್ರಜೆಗಳಾಗುವಂತೆ ರೂಪಿಸಬೇಕಿದೆ, ಇದಕ್ಕಾಗಿ ಶಿಕ್ಷಕರು ನಮ್ಮ ದೇಶದ ಮಹಾನತೆ ಹಾಗೂ ಸುಸಂಸ್ಕೃತಿಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಪಠ್ಯೇತರವಾಗಿ ಜ್ಞಾನ ನೀಡುತ್ತಿರಬೇಕು ಎಂದರಲ್ಲದೇ ಶಿಕ್ಷಣವು ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುವುದಕ್ಕೆ ಸೀಮಿತವಾಗದೇ ಭವಿಷ್ಯದಲ್ಲಿ ಅವರೆಲ್ಲ ಉತ್ತಮ ಪ್ರಜೆಗಳಾಗುವಂತೆಯೂ ಮಾಡಬೇಕು ಎಂದರು.
Training Camp ಹೂಕುಂಡದಲ್ಲಿ ಪುಷ್ಪ ಸ್ಥಾಪನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜ.ಪಂ.ವಿ. ವಿದ್ಯಾಪೀಠದ ಉಪಾಧ್ಯಕ್ಷ ಡಿ ಎಂ ಹಾಲಸ್ವಾಮಿ ಮಾತನಾಡಿ ಜ್ಞಾನಿಗಳ, ಉಪನ್ಯಾಸಕರ ಮಾರ್ಗದರ್ಶನವೂ ಶಿಕ್ಷಕ ವೃತ್ತಿಗೆ ಅವಶ್ಯ, ಪ್ರಶಿಕ್ಷಣಾರ್ಥಿಗಳು ಉಪನ್ಯಾಸಕರ ಅನುಭವಾಮೃತವನ್ನು ಅರಿತು ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಕೊಡಬೇಕು ಎಂದು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾಪೀಠದ ನಿರ್ದೇಶಕ ಎನ್ ಹೆಚ್ ಪಾಟೀಲ್ ಅವರು ಮಾತನಾಡಿ ಪೌರತ್ವವು ವಂಶಪಾರಂಪರ್ಯವಾಗಿಯೂ ಬರಬಹುದು ಅರ್ಜಿ ಹಾಕಿಯೂ ಪಡೆಯಬಹುದು ಆದರೆ ಸಂವಿಧಾನವನ್ನು ಉಲ್ಲಂಘಿಸಿದಲ್ಲಿ ಪೌರತ್ವ ಹೋಗುತ್ತದೆ.ಪೌರತ್ವದ ಮಹತ್ವವನ್ನ ಅರಿತು ನಡೆಯಬೇಕು ಎಂದರು. ಮಹಾವಿದ್ಯಾಲಯದ ಉಪನ್ಯಾಸಕ ವಿ ಎಸ್ ಹಿರೇಮಠ್ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಪ್ರಾಂಶುಪಾಲ ಡಾ. ಬಿ ಆರ್ ಗುರುದೇವ್, ಹಿರಿಯ ಉಪನ್ಯಾಸಕ ಬಿ ಎಂ ಸದಾಶಿವಯ್ಯ, ಸಹಾಯಕ ಪ್ರಾಧ್ಯಾಪಕಿ ಡಾ. ಹರ್ಷಲತಾ ಎಂ ವಿ, ಉಪನ್ಯಾಸಕಿ ರಬಿಯಾ ಬಸ್ರಿ, ಟಿ ಎನ್ ನಾಗರಾಜ್,ವಾಸುದೇವ ಎನ್ ಜಿ, ಶ್ರುತಿ ಕೆ ಹೆಚ್,ಆರಾಧ್ಯ ಎನ್ ಮುಂತಾದವರು ಉಪಸ್ಥಿತರಿದ್ದರು.
