ಕುಂಸಿಯ ರಾಷ್ಟ್ರೀಯ ಹೆದ್ದಾರಿ 206 ಈಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಂಸಿ ಆಯನೂರು, ಚೋರಡಿ ಭಾಗದ ಜನರಲ್ಲಿ ಆತಂಕ ಉಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ರಸ್ತೆಯಲ್ಲಿ ತ್ಯಾವರೆಕೊಪ್ಪದ ಸಿಂಹಧಾಮ ದವರೆಗೂ ದ್ವಿಪಥ ರಸ್ತೆಯಾಗಿದೆ. ತ್ಯಾವರೆಕೊಪ್ಪ ದಿಂದ ಸಾಗರದವರೆಗೂ ಒಂದೇ ರಸ್ತೆಯಿದೆ.
ಆಯನೂರು ಹಾಗೂ ಚೋರಡಿಗೆ ಹೋಲಿಸಿದರೆ ಕುಂಸಿಯ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಸಣ್ಣದಾಗಿದೆ. ರಸ್ತೆ ಬದಿ ನಿಂತಿದ್ದ ನಮ್ಮ ತಂದೆ ನನ್ನ ಕಣ್ಣೆದುರೇ ರಸ್ತೆ ಅಪಘಾತದಲ್ಲಿ ಮೃತರಾದರು. ದಯವಿಟ್ಟು ರಸ್ತೆ ವಿಸ್ತರಣೆ ಮಾಡಿ, ಅಪಘಾತಗಳನ್ನು ತಪ್ಪಿಸಿ ಎಂದು ಸ್ಥಳೀಯರಾದ ಪ್ರಶಾಂತ್ ಡಿ.ಎನ್.ಅವರು ಮನವಿ ಮಾಡಿದ್ದಾರೆ.
ಆಯನೂರಿನಿಂದ ಕುಂಸಿಯನ್ನು ಹಾಯ್ದು ಚೋರಡಿ ತಲುಪುವ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿವೆ.ಈ ಮಾರ್ಗದಲ್ಲಿ ಸುಮಾರು 6 ಶಾಲೆಗಳಿದ್ದು, 3 ಕಾಲೇಜುಗಳಿವೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದೇ ಶಾಲಾ-ಕಾಲೇಜುಗಳಿಗೆ ಜೀವ ಭಯದ ಹಂಗು ತೊರೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಭಾಗದ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ರಸ್ತೆ ನಿಯಮಗಳ ಸೂಚನಾ ಫಲಕ, ಹಂಪ್ಸ್ ಹಾಗೂ ಶಾಲಾ-ಕಾಲೇಜು ವಲಯಗಳಲ್ಲಿ ಝೀಬ್ರಾ ಗೆರೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕಿಸಲಾಗುವುದು. ರಸ್ತೆ ವಿಸ್ತರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಿಂಗಪ್ಪ ಅವರು ತಿಳಿಸಿದ್ದಾರೆ.
ಹೆದ್ದಾರಿ ಜೀವ ಸುರಕ್ಷತೆಗೆ ಕ್ರಮ ಕೈಗೊಳ್ಳಿ
Date: