ನಗರೀಕರಣ ಅರಣ್ಯ ನಾಶ ಹೀಗೆ ಆಧುನೀಕರಣಕ್ಕೆ ಪ್ರಕೃತಿಯ ಮೇಲೆ ಮಾನವನಿಂದ ಬೀರುತ್ತಿರುವ ದುಷ್ಪರಿಣಾಮಕ್ಕೆ ಪ್ರಕೃತಿ ಸಹಜವಾಗಿ ಆಗಾಗ ತಕ್ಕ ಉತ್ತರ ಕೊಡುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ವ್ಯತ್ಯಾಸದಿಂದಾಗಿ 2035 ರ ವೇಳೆಗೆ ದಕ್ಷಿಣ ಭಾರತದಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ. ಮಳೆ ಪ್ರಮಾಣ, ಸೈಕ್ಲೋನ್ ಸೃಷ್ಟಿ ನಿರೀಕ್ಷೆಗೂ ಮೀರಿ ಅಧಿಕವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದೆ.
ವಾತಾವರಣದಿಂದ ಆಗುತ್ತಿರುವ ವೈಪರೀತ್ಯದಿಂದಾಗಿ ವರ್ಷದ ಮಳೆ ಒಂದೆರಡು ದಿನಗಳಲ್ಲಿ ಸುರಿಯುವಂತೆ ಮಾಡುತ್ತಿದೆ. ಇದರಿಂದಾಗಿ ವರ್ಷಕ್ಕೆ 6ಕ್ಕೂ ಹೆಚ್ಚು ಸೈಕ್ಲೋನ್ ಹೊಡೆತಗಳನ್ನ ಎದುರಿಸಲಾಗುತ್ತಿದೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
1880 ನಿಂದ 1980 ರ ನಡುವಿನ 1 ಶತಮಾನದಲ್ಲಿ ಒಂದು ಡಿಗ್ರಿ ತಾಪಮಾನ ಏರಿಕೆಯ ವ್ಯತ್ಯಾಸವಷ್ಟೇ ಇದೆ. ಆದರೆ ಆ ಬಳಿಕ ಕೇವಲ 20 ವರ್ಷಗಳಲ್ಲಿ ಏರಿಕೆ ಕಂಡುಬಂದಿದೆ. 2000 ರಿಂದ 2020 ರ ನಡುವೆ ಇದೇ ಬದಲಾವಣೆ ಮತ್ತಷ್ಟು ವೇಗವಾಗಿ ಕಂಡುಬಂದಿದೆ.
‘ಪಶ್ಚಿಮಘಟ್ಟಗಳಲ್ಲಿ ವಾತಾವರಣದಲ್ಲಿನ ಉಷ್ಣತೆಯಿಂದಾಗಿ ಸಮಸ್ಯೆಗಳು ಹೆಚ್ಚಾಗಿದೆ. 2030ರ ವೇಳೆಗೆ ಶೇ. 30 ರಷ್ಟು ಪಶ್ಚಿಮ ಘಟ್ಟಗಳ ಅರಣ್ಯಕ್ಕೆ ಗಂಭೀರ ಸ್ವರೂಪದ ಹಾನಿ ಸೃಷ್ಟಿಯಾಗಲಿದೆ ಹಾಗೂ ಈಗಾಗಲೇ ಇಲ್ಲಿನ ಹಸಿರು ಪದರಕ್ಕೆ ತೀವ್ರ ಹಾನಿಯಾಗಿದೆ. ಈ ಕಾರಣದಿಂದಾಗಿ ಪಶ್ಚಿಮಘಟ್ಟ ಭಾಗದಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಸ್ಥಿತಿಗಳು ಸುಸ್ಥಿತಿಗೆ ಬರಬೇಕೆಂದರೆ ಸರ್ಕಾರವು ಕೂಡಲೇ ವಿಜ್ಞಾನಿಗಳ ವರದಿಗಳಿಗೆ ಮಹತ್ವ ನೀಡಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಟಿ.ವಿ.ರಾಮಚಂದ್ರ ತಿಳಿಸಿದ್ದಾರೆ.
‘ತಾಪಮಾನ ಏರಿಕೆಯೊಂದಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನಗರೀಕರಣದ ಪರಿಣಾಮ ಹವಾಮಾನ ತೀವ್ರಗತಿಯಲ್ಲಿ ಬದಲಾಗುತ್ತಿದೆ’ ಎಂದು ಹಿರಿಯ ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ಹೇಳಿದ್ದಾರೆ.