Gowri Ganesha and Eid milad Festivals ಈ ಬಾರಿಯ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಾಗು ವಿಸರ್ಜನ ದಿನಾಂಕ ಮತ್ತು ಈದ್ ಮಿಲಾದ್ ಹಬ್ಬವು ಒಂದೇ ದಿನಾಂಕದಂದು ದಿನಾಂಕ:28-09-2023 ರಂದು ಬಂದಿರುತ್ತದೆ. ಎರಡೂ ಹಬ್ಬಗಳನ್ನು ಶಿವಮೊಗ್ಗ ನಾಗರೀಕರು ಅತ್ಯಂತ ವಿಜೃಂಭಣೆಯಿಂದ ರಸ್ತೆ ಅಲಂಕಾರಗಳೊಂದಿಗೆ ಆಚರಿಸುತ್ತಾ ಬಂದಿರುತ್ತೇವೆ. ಇನ್ನೊಂದು ಪ್ರಮುಖ ಗಣಪತಿಯಾದ ಓಂ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನು ಸಹ ಈ ಹಿಂದೆ ದಿನಾಂಕ:01-10-2023 ರಂದು ನಿಗದಿಪಡಿಸಿಕೊಳ್ಳಲಾಗಿತ್ತು.
ಈ ಮೂರು ಪ್ರಮುಖ ಆಚರಣೆಯಲ್ಲಿ ರಸ್ತೆ ಅಲಂಕಾರಗಳು ಹಾಗೂ ವೈಭೋವಯುತ ಹೆಚ್ಚಿನ ಜನ ಪಾಲ್ಗೊಳ್ಳುವ ಮೆರವಣಿಗೆ ಕಾರ್ಯಕ್ರಮಗಳಿರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಂತ ಶಾಂತಿಯುತವಾಗಿ ಈ ಹಬ್ಬಗಳನ್ನು ಹಾಗೂ ಮೆರವಣಿಗೆಗಳನ್ನು ನಡೆಸಲು ಈಗಾಗಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಸಂಬಂಧಪಟ್ಟ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ವಿವಿಧ ಧಾರ್ಮಿಕ ಮುಖಂಡರುಗಳ ಜೊತೆ ಹಲವಾರು ಸುತ್ತಿನ ಸಭೆಯನ್ನು ನಡೆಸಿರುತ್ತಾರೆ. ಸಭೆಗಳಲ್ಲಿ ಪಾಲ್ಗೊಂಡ ಎಲ್ಲರೂ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಬೇಕಾದ ತಯಾರಿ ಬಗ್ಗೆ ಚರ್ಚಿಸಿರುತ್ತಾರೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಅನುವು ಮಾಡಿಕೊಡಲು ಮೆರವಣಿಗೆ ದಿನಾಂಕವನ್ನು ಬದಲಾಯಿಸಿಕೊಂಡಿರುತ್ತಾರೆ. ಈದ್ ಮಿಲಾದ್ ಮೆರವಣಿಗೆಗೆ ಅನುವು ಮಾಡಿಕೊಡಲು ಓಂ ಗಣಪತಿಯ ಮೆರವಣಿಗೆ ದಿನಾಂಕ ಬದಲಾಯಿಸಿಕೊಳ್ಳಲು ಒಪ್ಪಿರುತ್ತಾರೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ನಿರಂತರ ಸಭೆಗಳನ್ನು ನಡೆಸಿ ಶ್ರಮವಹಿಸಿರುತ್ತಾರೆ.ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಕಾರ್ಯಕ್ರಮವನ್ನು ದಿನಾಂಕ:28.09.2023 ರಂದು ನಡೆಸಲು ತೀರ್ಮಾನಿಸಿರುತ್ತದೆ. ಈದ್ ಮಿಲಾದ್ ಹಬ್ಬದ ಆಚರಣೆಯ ಸಂಬಂಧ ಅಲಂಕಾರಗಳಿಗೆ ಅನುವು ಮಾಡಿಕೊಡಲು ದಿನಾಂಕ:30-09-2023 ರಂದೇ ಓಂ ಗಣಪತಿಯ ಮೆರವಣಿಗೆಯ ಕಾರ್ಯಕ್ರಮವನ್ನು ನಡೆಸಲು ಸಂಬಂಧಿಸಿರುವವರು ಒಪ್ಪಿರುತ್ತಾರೆ. ಈಟ್ ಮಿಲಾದ್ ಹಬ್ಬದ ಸಂಬಂಧದ ಮೆರವಣಿಗೆಯನ್ನು ದಿನಾಂಕ:01-10-2023 ರಂದು ನಡೆಸಲು ನಾವುಗಳೆಲ್ಲಾ ಒಪ್ಪಿರುತ್ತೇವೆ..!
Gowri Ganesha and Eid milad Festivals ಶಿವಮೊಗ್ಗ ನಗರದ ಸಾರ್ವಜನಿಕರ, ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದಲೂ ಹಾಗು ಪೊಲೀಸ್ ಇಲಾಖೆಯವರು ಒದಗಿಸಬೇಕಾದ ಬಂದೋಬಸ್ತಿಗೆ ನಿಯೋಜಿಸುವ ಪೊಲೀಸ್ ಸಿಬ್ಬಂದಿಗಳ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಭೆಯಲ್ಲಿ ಸೇರಿದ ಎಲ್ಲಾ ಹಿರಿಯರು ಹಾಗೂ ಅಧಿಕಾರಿ ವರ್ಗದವರು ಈ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿರುತ್ತದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ ಅದರಂತೆ ಶಾಂತಿಯುತವಾಗಿ ಎಲ್ಲಾ ಹಬ್ಬಗಳನ್ನು ಆಚರಿಸಲು ಈ ಮೂಲಕ ವಿನಂತಿಸಲಾಗಿದೆ.