Rural Sports Event ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಸರ್ಕಾರ ಅವುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿ ಪುನಶ್ಚೇತನಗೊಳಿಸುತ್ತಿದೆ ಎಂದು ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.
ಚಿಕ್ಕಮಗಳೂರು, ತಾಲ್ಲೂಕಿನ ಬೆಟ್ಟದಮಳಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ದೇವದಾನದ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡುವ ಸಲುವಾಗಿ ಖೋಖೋ, ಕಬ್ಬಡ್ಡಿ ಸ್ಪರ್ಧೆಗಳನ್ನೊಳಗೊಂಡ ಕ್ರೀಡಾಕೂಟವನ್ನು ಆಯೋಜಿಸಲು ಮುಂದಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಕ್ರೀಡಾಸಕ್ತಿ ಬೆಳೆಸಿಕೊಂಡು ರಾಜ್ಯಮಟ್ಟದಲ್ಲಿ ಹೆಸರು ಗಳಿಸಬೇಕು ಎಂದರು.
ತಾಲ್ಲೂಕು ದೈಹಿಕ ಶಿಕ್ಷಕ ಪರಮೇಶ್ವರ್ ಪ್ರಾಸ್ತಾವಿಕ ಮಾತನಾಡಿ ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ವಾದ ಸಂಗತಿ. ಗೆಲುವು ಕಂಡವರು ಮುಂದಿನ ಹೆಜ್ಜೆಯತ್ತ ದಾಪುಗಾಲು ಇರಿಸಿದರೆ. ಸೋಲುಂಡವರು ಮರಳಿ ಪ್ರಯತ್ನದ ಕಡೆ ಹೆಚ್ಚು ಗಮನಹರಿಸಿದರೆ ಯಶಸ್ಸು ಲಭಿಸಲಿದೆ ಎಂದರು.
Rural Sports Event ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಂಪತ್, ವಿಪತ್ತು ನಿರ್ವಹಣಾ ಘಟಕದ ಚಂದ್ರ ಶೇಖರ್, ಫ್ಲೌಡ್ ಫ್ಯಾಕ್ಟರಿ ಮಾಲೀಕರಾದ ಚಂದಿಲ್ ಕುಮಾರ್, ವೈಶ್ಯ ಹಾಸ್ಟೆಲ್ ಮಾಲೀಕ ರಮೇಶ್, ಕಾಫಿ ಬೆಳೆಗಾರ ನಾಗೇಶ್‌ಗೌಡ, ದೇವದಾನ ಪಿಡಿಓ ದೇವರಾಜ್, ಕೃಷ್ಣಚಾರ್ಯ, ಸಿ.ಆರ್.ಪಿ ಮಹೇಶ್, ಮಾನ್ವಿತಾ, ಪ್ರಕಾಶ್ ಹಾಗೂ ಮತ್ತಿತರರು ಇದ್ದರು.
ಶಾಲೆಯ ಶಿಕ್ಷಕರಾದ ಮಂಜುಳದೇವಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಶ್ರೀಮತಿ ಅನುಸೂಯ ಸ್ವಾಗತಿಸಿದರು. ಪುಷ್ಪವತಿ ನಿರೂಪಿಸಿದರು. ವನಜಾಕ್ಷಿ ವಂದಿಸಿದರು.