SN channabasappa ಶ್ರೀಕೃಷ್ಣ ನಮ್ಮೆಲ್ಲರ ಆರಾಧ್ಯ ದೈವ. ಇಡೀ ಜಗತ್ತಿಗೆ ಬೆಳಕನ್ನು ನೀಡಿ, ಧರ್ಮ ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಕೃಷ್ಣ ಎಂದು ಶಿವಮೊಗ್ಗ ನಗರ ಕ್ಷೇತ್ರ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮoದಿರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೋ ಸಂರಕ್ಷಣೆಗೆ ಸಂಪೂರ್ಣವಾಗಿ ಶಕ್ತಿ ಕೊಟ್ಟವನು ಶ್ರೀಕೃಷ್ಣ. ಶ್ರೀಕೃಷ್ಣ ಈ ಸಮಾಜಕ್ಕೆ ಮಾತ್ರ ದೇವರಲ್ಲ, ಇಡೀ ಪ್ರಪಂಚಕ್ಕೆ ದೇವರು. ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸವನ್ನು ಮಾಡು ಅದರ ಫಲ ನನಗೆ ಬಿಡು, ಅದಕ್ಕೆ ದಕ್ಕಬೇಕಾದ ಫಲ ದಕ್ಕುತ್ತದೆ ಎಂಬ ಕೃಷ್ಣನ ಮಾತಿನಂತೆ ಧರ್ಮ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಜಿ.ಕೆ ಪ್ರೇಮ ಮಾತನಾಡಿ, ಕೃಷ್ಣನನ್ನು ಪುರಾಣದ ನೆಲೆಯಲ್ಲಿ ಮತ್ತು ಇತಿಹಾಸದ ನೆಲೆಯಲ್ಲಿ ನೋಡಬಹುದು. ಯಾದವ ಸಾಮ್ರಾಜ್ಯ ಮಥುರದ ಅರಸ ಕಂಸನ ತಂಗಿ ದೇವಕಿ ಮತ್ತು ವಸುದೇವನ ಮಗನಾದ ಜಗದ್ಧೋದಾರಕ ಕೃಷ್ಣನನ್ನು ಸಾಕಿ ಸಲುಹಿದವಳು ಯಶೋಧ. ಕೃಷ್ಣನಲ್ಲಿ ಅಪಾರ ಸಾಹಸ ಶಕ್ತಿ ಇದ್ದು ಕಾಳಿಂಗ ಸರ್ಪದ ಉಪಟಳದಿಂದ ಜನರನ್ನು ರಕ್ಷಿಸುತ್ತಾನೆ, ಮನಸ್ಸಿನಲ್ಲಿಯೇ ಲೋಕವನ್ನು ಅವಲೋಕನ ಮಾಡಿಕೊಳ್ಳುವ ಕೃಷ್ಣ, ಸುಧಾಮನ ಕಷ್ಟಗಳನ್ನು ನಿವಾರಿಸುತ್ತಾನೆ. ಸತ್ಯಭಾಮೆಯ ಅತ್ಯಂತ ಸರಳ ಭಕ್ತಿಯನ್ನು ಮೆಚ್ಚಿ ತುಳಸಿ ದಳಕ್ಕೆ ಶ್ರೀಕೃಷ್ಣ ಪರಮಾತ್ಮ ಒಲಿಯುತ್ತಾನೆ. ಅವನ ವಿಶೇಷ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಇತಿಹಾಸದ ಪ್ರಕಾರ ಉತ್ತರಭಾರತದಲ್ಲಿನ ವೃಷ್ಠಿ ಎಂಬ ಬುಡಕಟ್ಟಿನ ಅಹಿರ ಜಾತಿಯ ಕೃಷ್ಣನ ಕಾಲಘಟ್ಟ ಕ್ರಿ.ಪೂ 800 ಕೊಳಲಿನ ನಾದದಿಂದ ಜಗತ್ತನ್ನು ಕುಣಿಸುವ ಶಕ್ತಿ ಹೊಂದಿದ್ದ ಕೃಷ್ಣ, ನಂದಗೋಕುಲದಿ0ದ ಮಥುರೆಗೆ ಹೋಗುವಾಗ ಕೊಳಲನ್ನು ಬಿಟ್ಟು ಚಕ್ರ ಮತ್ತು ಶಂಖವನ್ನು ಆಯುಧವಾಗಿ ಹಿಡಿಯುತ್ತಾನೆ. ಎತ್ತಿನಬಂಡಿಯ ಚಕ್ರವನ್ನು ಆಯುಧವಾಗಿ ಬಳಸಿದ ಪ್ರಥಮ ಪುರುಷ ಶ್ರೀಕೃಷ್ಣ ಪರಮಾತ್ಮ. ಆತನ ವ್ಯಕ್ತಿತ್ವವನ್ನು ಮಾದರಿಯಾಗಿಟ್ಟುಕೊಂದು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
SN channabasappa ಕಾರ್ಯಕ್ರಮದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲ್ಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಸ್.ಹೆಚ್.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್.ಹೆಚ್, ಧರ್ಮ ಪ್ರಸಾದ್, ರಮೇಶ್ ಮತ್ತಿತ್ತರರು ಉಪಸ್ಥಿತರಿದ್ದರು.