Karnataka Achievement Award ಹೆಸರಾಂತ ಉದ್ಯಮಿ, ಶಿವಮೊಗ್ಗದ ಎಸ್‌ಜಿಕೆ ಇಂಡಸ್ಟ್ರೀಸ್ ನಿರ್ದೇಶಕ ಬಿ.ಸಿ. ನಂಜುಂಡ ಶೆಟ್ಟಿ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದಲ್ಲಿ “ಕರ್ನಾಟಕ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಬೆಂಗಳೂರು ಹಾಗೂ ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದಲ್ಲಿ ಶಿವಮೊಗ್ಗ ನಗರದ ಕೈಗಾರಿಕೋದ್ಯಮಿ, ದಾನಿ, ಸಮಾಜ ಸೇವಕ ನಂಜುಂಡ ಶೆಟ್ಟಿ ಅವರಿಗೆ ವಿಶೇಷ ಗೌರವ ನೀಡಿ ಅಭಿನಂದಿಸಲಾಯಿತು.
ಉದ್ಯಮಿ ಬಿ.ಸಿ.ನಂಜುಂಡಶೆಟ್ಟಿ ಅವರು 50 ವರ್ಷದ ಕೈಗಾರಿಕಾ ಕ್ಷೇತ್ರದ ಕಾರ್ಯ, 500 ಕೋಟಿ ರೂ.ಗೂ ಹೆಚ್ಚಿನ ವಹಿವಾಟು, 4000 ಕ್ಕೂ ಹೆಚ್ಚು ಕಾರ್ಮಿಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ, ವಿಶ್ವದಲ್ಲಿ ಒಟ್ಟು ಮಾರುಕಟ್ಟೆಯ ಶೇ. 25 ಉತ್ತಮ ದರ್ಜೆಯ ವಾಲ್ಸೆಟ್ ತಯಾರಿ ಮತ್ತು ರಫ್ತು, ಕಾರ್ಖಾನೆಗಳಲ್ಲಿ ನೂತನ ತಾಂತ್ರಿಕ ಅಳವಡಿಕೆ ಸೇರಿದಂತೆ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ.
ಕೈಗಾರಿಕಾ ಕ್ಷೇತ್ರದಲ್ಲಿ ಐದು ದಶಕಗಳ ಸಾಧನೆ ಮತ್ತು ಸಮುದಾಯ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿರುವ ಉದ್ಯಮಿ ಬಿ.ಸಿ.ನಂಜುಂಡಶೆಟ್ಟಿ ಅವರ ಸೇವೆ ಗಮನಿಸಿ ಜೀವಮಾನದ ಸಾಧನೆಯಾಗಿ “ಕರ್ನಾಟಕ ಸಾಧಕ ಪ್ರಶಸ್ತಿ” ಅನ್ನು ರಾಯಚೂರಿನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
Karnataka Achievement Award ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಶ್ರೀಮತಿ ಮನೋಹರ, ಉದ್ಯಮಿ ಕಿರಣ್, ಎಂ.ರಾಜು, ಪ್ರದೀಪ್ ಎಲಿ, ರಮೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಜೆ.ಆರ್.ವಾಸುದೇವ್, ಜಿ.ವಿ.ಕಿರಣ್‌ಕುಮಾರ್ ಸೇರಿದಂತೆ ಶಿವಮೊಗ್ಗದ ಕೈಗಾರಿಕಾ ಉದ್ಯಮಿಗಳು ಉಪಸ್ಥಿತರಿದ್ದರು.