ATNCC College Shivamogga ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸೇವಾ ಮನೋಭಾವನೆ ಬೆಳೆಸುವಲ್ಲಿ ಎನ್‌ಎಸ್‌ಎಸ್ ಸಹಕಾರಿಯಾಗಲಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.
ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಹಯೋಗದಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಶಿಬಿರ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಯಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ ರೀತಿಯ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ಪರಸ್ಪರ ಪರಿಚಯ, ಓಡನಾಟ ಹಾಗೂ ಮಾನಸಿಕ ಸದೃಢತೆ ಹೊಂದಲು ಸಹಕಾರಿ ಆಗುತ್ತದೆ. ವಿವಿಧ ಪ್ರದೇಶದ ಜನಜೀವನ ವ್ಯವಸ್ಥೆಯ ಅರಿವು ಬೆಳೆಯುತ್ತದೆ ಎಂದು ಹೇಳಿದರು.
ATNCC College Shivamogga ಸಮುದಾಯ ಸೇವಾ ಮನೋಭಾವನೆಯ ಮಹತ್ವವನ್ನು ಎನ್‌ಎನ್‌ಎಸ್ ಕಲಿಸುತ್ತದೆ. ರಾಜ್ಯ, ರಾಷ್ಟ್ರ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳು ಕಾಲೇಜಿನ ಹಂತದಲ್ಲಿ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ಮಮತಾ.ಪಿ.ಆರ್. ಮಾತನಾಡಿ, ಎನ್‌ಎಸ್‌ಎಸ್ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಶಿಸ್ತು ಕಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ 180 ವಿದ್ಯಾರ್ಥಿಗಳು ಪಾಲ್ಗೊಂಡು ಕ್ಯಾಂಪಸ್ ಸ್ವಚ್ಛಗೊಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ ಕೆ.ಎಂ.ನಾಗರಾಜ, ಪ್ರೊ. ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.