Bapuji Educational Association ವಿದ್ಯಾರ್ಥಿಗಳಲ್ಲಿ ಈಚೆಗೆ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದ್ದು ಅಸಮರ್ಪಕ ಜೀವನ ಶೈಲಿಯೂ ಇದಕ್ಕೆ ಕಾರಣವಾಗಿದ್ದು ಓದಿಗೆ ಆದ್ಯತೆ ಕೊಟ್ಟಷ್ಟೇ ಆರೋಗ್ಯಕ್ಕೂ ಆದ್ಯತೆ ಕೊಡಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯ ಪಟ್ಟರು.
ಅವರಿಂದು ಬಾಪೂಜಿ ವಿದ್ಯಾಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಓದಿನೊಂದಿಗೆ ಕ್ರೀಡೆ, ವ್ಯಾಯಾಮ, ಸಾಹಿತ್ಯ, ಲಲಿತ ಕಲೆಗಳು, ಯೋಗ, ಪ್ರಾಣಾಯಾಮ ಮುಂತಾದವುಗಳಿಗೂ ದಿನಚರಿಯಲ್ಲಿ ಸಮಯ ಮೀಸಲಿಡಬೇಕು, ಬಾಯಿ ರುಚಿಗೆ ಆದ್ಯತೆ ಕೊಟ್ಟಲ್ಲಿ ಹೊಟ್ಟೆಯು ಕಸದ ತೊಟ್ಟಿ ಯಂತಾಗುತ್ತದೆ, ಜೀವನ ಶೈಲಿಯಲ್ಲಿ ಆಹಾರ ವಿಧಾನವೂ ಪ್ರಮುಖವಾಗಿದೆ, ಯುವ ಜನರು ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಮುಂತಾದವುಗಳನ್ನು ವೀಕ್ಷಿಸುವ ಸಮಯದಲ್ಲೂ ನಿಯಂತ್ರಣ ಬೇಕು, ಇದಕ್ಕೆ ‘ಸ್ಕ್ರೀನ್ ಟೈಮ್ ಮ್ಯಾನೇಜ್ಮೆಂಟ್’ ಎಂದು ಹೇಳಲಾಗುತ್ತದೆ ಎಂದರಲ್ಲದೆ ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯಗಳ ಬಗ್ಗೆ ತಾವೇ ತಿಳಿದುಕೊಂಡು ಪೋಷಕರ ಶಿಕ್ಷಕರ ಅನುಭವದ ನುಡಿಗಳನ್ನಾಲಿಸಿ ಪರಿಹಾರ ಕಂಡುಕೊಳ್ಳಬೇಕು, ಇದರಿಂದ ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡಗಳಿಂದ ಪರಿಹಾರ ಸಾಧ್ಯ, ಆರೋಗ್ಯಕರ ಜೀವನ ಶೈಲಿಯಿಂದ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ, ಇದನ್ನೇ ವಿದ್ಯಾರ್ಥಿ ದೆಸೆಯಲ್ಲಿನ ‘ಸುವರ್ಣ ಸಮಯ’ ಎನ್ನಲಾಗುತ್ತದೆ ಎಂದರು.
Bapuji Educational Association ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟಾರ್ ಡಾ.ಬಿ.ಈ.ರಂಗಸ್ವಾಮಿಯವರು ಕೌಟುಂಬಿಕ ಅಪರಾಧಗಳ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ, ಸಂಸ್ಕಾರವಿಲ್ಲದ, ಶಿಕ್ಷೆ ಇಲ್ಲದ, ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣ ವಿಧಾನವು ಇದಕ್ಕೆ ಕಾರಣವಾಗಿದ್ದು ವೈಫಲ್ಯಗಳಿಂದ ಧೃತಿಗೆಡದೆ ಆತ್ಮವಿಶ್ವಾಸದಿಂದ ಗೆಲುವಿನ ಸಂಕಲ್ಪ ಮಾಡುತ್ತಾ ಸ್ವಸಾಮರ್ಥ್ಯದ ಅರವಿನೊಂದಿಗೆ ಹೆಜ್ಜೆಗಳ ನ್ನಿಡಬೇಕು, ಶೈಕ್ಷಣಿಕ ಬುದ್ಧಿವಂತಿಕೆಗಿಂತ ಭಾವನಾತ್ಮಕ ಬುದ್ಧಿವಂತಿಕೆ ಇದಕ್ಕೆ ಅವಶ್ಯವಾಗಿದ್ದು ಗುರಿ ಸಾಧನೆಗೆ ದೀರ್ಘಾವಧಿಯನ್ನು ನಿಶ್ಚಯಿಸಿಕೊಳ್ಳದೆ ಅಲ್ಪಾವಧಿಯಲ್ಲೇ ಮಾಡಬೇಕು, ದೇಶದಲ್ಲಿ 93 ಕೋಟಿಗೂ ಅಧಿಕ ಮಂದಿ ನಿರಂತರ ಮೊಬೈಲ್ ಬಳಸುತ್ತಿದ್ದು ಈಗ ಮೊಬೈಲ್ ಅತಿ ಬಳಕೆಯ ಚಟದಿಂದ ಮುಕ್ತರನ್ನಾಗಿಸುವ ಕೇಂದ್ರಗಳು ಬೆಂಗಳೂರಿನಲ್ಲೇ ಸುಮಾರು 70ಕ್ಕೂ ಹೆಚ್ಚು ಆರಂಭಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ.ರುದ್ರಪ್ಪನವರು ಡಾ.ಶಾಮನೂರು ಶಿವಶಂಕರಪ್ಪನವರ ದೂರ ದೃಷ್ಟಿಯಿಂದ ಸ್ಥಾಪನೆಯಾದ ಕಾಲೇಜು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದ್ದು ಇಲ್ಲಿ ಕಲಿತ ಸುಮಾರು 2500 ವಿದ್ಯಾರ್ಥಿಗಳಲ್ಲಿ ಶೇಕಡ 50ರಷ್ಟು ವಿದ್ಯಾರ್ಥಿಗಳು ಉದ್ಯೋಗಿಗಳಾಗಿ ಸ್ವಾವಲಂಬಿಗಳಾಗಿದ್ದಾರೆ ಹಾಗೂ ಉದ್ಯೋಗದಾತರಾಗಿ ಅನೇಕರಿಗೆ ಉದ್ಯೋಗ ಕೊಟ್ಟಿರುವುದು ಹೆಮ್ಮೆಯ ವಿಷಯ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿ ಪ್ರಸ್ತುತ ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಆಯುರ್ವೇದ ವೈದ್ಯರಾದ ಬಿ.ಕಿರಣ್ ಮತ್ತು ಡಾ. ಶಾಲಿನಿ ಹೆಚ್. ಉಪಸ್ಥಿತರಿದ್ದು ಅನುಭವಗಳನ್ನು ಹಂಚಿಕೊಂಡರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಸಹನಾ ಮತ್ತು ಸುವಿಧ ಮಾಡಿದರೆ ಪ್ರಾರ್ಥನೆಯನ್ನು ದರ್ಶನ್ ಆರ್. ಹಾಡಿದರು.ಬಿ. ಪುಷ್ಪ ಸ್ವಾಗತ ಕೋರಿದರು, ಕೀರ್ತಿ ಜಿ.ಆರ್, ಆಯಿಶಾ ಸಿದ್ದಿಕಾ, ರಾಜೇಶ್ವರಿ ಕೆ.ಎಂ. ಹಾಗೂ ಮುಸ್ಕಾನ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿ ಸಂಘದ ಚಂದ್ರು ಪಿ.ಎಸ್, ಕಿಶನ್ ವೈ. ಉಪಸ್ಥಿತರಿದ್ದರು. ಮೊಹಮ್ಮದ್ ಹುಜೇಫ್ ವಂದನೆ ಸಮರ್ಪಿಸಿದರು.
-ಚಿತ್ರ ಹಾಗೂ ವರದಿ ಎಚ್.ಬಿ.ಮಂಜುನಾಥ-