District Health and Family Welfare ವಿದ್ಯಾರ್ಥಿಗಳು ರೋಗವಾಹಕ ಸೊಳ್ಳೆಗಳ ನಿಯಂತ್ರಣ ಕುರಿತು ಹೊಸ ಚಿಂತನೆಗಳೊಂದಿಗೆ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಸೊಳ್ಳೆ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕoತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ವಿಶ್ವ ಸೊಳ್ಳೆ ದಿನದ ಅಂಗವಾಗಿ ಇಂದು ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸೊಳ್ಳೆಗಳ ನಿಯಂತ್ರಣ ಮಾದರಿ ಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೊಳ್ಳೆಯಿಂದ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳು ಮತ್ತು ಅವುಗಳ ನಿಯಂತ್ರಣಕ್ಕೆ ಏನು ಕ್ರಮಗಳನ್ನು ಅನುಸರಿಸಬೇಕೆಂದು ತಿಳಿದುಕೊಂಡು, ಶಿಕ್ಷಕರ ಸಹಕಾರದಿಂದ ಉತ್ತಮ ಮಾದರಿಗಳನ್ನು ತಯಾರಿಸಿ ಪ್ರದರ್ಶನವನ್ನು ಮಾಡಿದ್ದಾರೆ. ಸೊಳ್ಳೆ ನಿಯಂತ್ರಣದಲ್ಲಿ ಸ್ವಚ್ಚತೆ ಮುಖ್ಯ ಪಾತ್ರ ವಹಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಚತೆ ಕಾಪಾಡಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅದನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅವರು ಸ್ಪರ್ಧೆಯಲ್ಲಿ ಮಕ್ಕಳು ವಿಜೇತರಾಗಿ ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಯಶಸ್ಸು ಸಾಧಿಸಲೆಂದು ಹಾರೈಸಿದರು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, 1897 ರಲ್ಲಿ ವಿಜ್ಞಾನಿ ರೊನಾಲ್ಡ್ ರೋಸ್ ಮಾನವನ ನಡುವೆ ಮಲೇರಿಯಾ ಹರಡುವ ಸೊಳ್ಳೆಯನ್ನು ಕಂಡುಹಿಡಿದ ನೆನಪಿಗಾಗಿ ಆಗಸ್ಟ್ 20 ರಂದು ಸೊಳ್ಳೆಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸೊಳ್ಳೆ ಚಿಕ್ಕದಾದರೂ ಅತ್ಯಂತ ಅಪಾಯಕಾರಿ. ಹಿಂದೆ ಮಲೇರಿಯಾ ಅತಿ ಹೆಚ್ಚು ಜನರನ್ನು ಕಾಡುತ್ತಿತ್ತು.ಶೇ.10 ರಷ್ಟು ಜನರು ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದರು. ಈಗ ಚಿಕುನ್‍ಗುನ್ಯ, ಡೆಂಗ್ಯು ಸೇರಿದಂತೆ ಅನೇಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತಿದ್ದು ನಿಯಂತ್ರಣ ಅತಿ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 165 ಡೆಂಗ್ಯು ಪ್ರಕರಣಗಳಿದೆ ಎಂದರು.
ಸೊಳ್ಳೆಯಿಂದ ಹರಡುವ ರೋಗದ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅವರಿಂದ ಸಮಾಜದಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆ, ಸಂಶೋಧನಾ ಪ್ರವೃತ್ತಿಯನ್ನು ಉತ್ತೇಜಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ ಎಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಮುಖ್ಯ. ಸೊಳ್ಳೆ ವಿಷಯದಲ್ಲಿ ಎಚ್ಚರಿಕೆ ತಪ್ಪಿದರೆ ಜೀವಕ್ಕೆ ಕುತ್ತು ಎದುರಾಗಬಹುದು. ಒಂದು ಸೊಳ್ಳೆ ಸುಮಾರು 300 ರಿಂದ 400 ಮೊಟ್ಟೆ ಇಟ್ಟು ಒಂದು ವಾರದಲ್ಲಿ ಸೊಳ್ಳೆ ಮರಿಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಇಂತಹ ರೋಗವಾಹಕ ಸೊಳ್ಳೆಯನ್ನು ನಿರ್ಮೂಲನೆ ಮಾಡಬೇಕಿದೆ. ಸೊಳ್ಳೆ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಮಕ್ಕಳು ಉತ್ತಮ ಸಂವಹನವಾಗಿದ್ದಾರೆ. ಆದ್ದರಿಂದ ಅವರಿಗೆ ಈ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಿಕ್ಷಣ ಸಂಯೋಜಕಿ ಶ್ರೀಮತಿ ಮಾತನಾಡಿ, ಜಿಲ್ಲೆಯ 27 ಶಾಲೆಗಳ ವಿದ್ಯಾರ್ಥಿಗಳು ಮಾದರಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳು ಸೊಳ್ಳೆ ನಿಯಂತ್ರಣ ಕುರಿತು ಮಾಹಿತಿ ಪಡೆದುಕೊಂಡು ಇಲ್ಲಿ ಪ್ರದರ್ಶನ ಕೈಗೊಂಡಿದ್ದಾರೆ. ಸರ್ಕಾರ ಸಹ ಮಕ್ಕಳಿಗೆ ಯಾವುದಾದರೂ ದುರ್ಘಟನೆ ನಿಯಂತ್ರಣ, ದೂರದೃಷ್ಟಿ ಮತ್ತು ಚಿಂತನಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸಲು ಸ್ಕೂಲ್ ಇನ್ನೋವೇಟಿವ್ ಸೆಂಟರ್‍ಗಳನ್ನು ತೆರೆಯಲು ಆದೇಶಿಸಿದೆ ಎಂದರು.
District Health and Family Welfare ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕರಾದ ರಾಘವೇಂದ್ರರವರು ತೀರ್ಪುಗಾರರಾಗಿ ಆಗಮಿಸಿ ಮಾತನಾಡಿದರು. ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಡಿಹೆಚ್‍ಓ ಕಚೇರಿ ಆಡಳಿತಾಧಿಕಾರಿ ಈಶ್ವರಪ್ಪ, ರೋಟರಿ ಸಂಸ್ಥೆಯ ವಿಜಯಕುಮಾರ್ ಇತರೆ ಅಧಿಕಾರಿ, ಸಹಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.