Dr. Selvamani ಆಡಳಿತದಲ್ಲಿ ದಕ್ಷತೆ, ಸ್ಥಿರತೆ ಮತ್ತು ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗಸ್ಟ್ 1 ರಿಂದ ಅನ್ವಯಗೊಳ್ಳುವಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಅವರು , ತಮ್ಮ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಿಗೆ ಅನುಕುಲವಾಗುವಂತೆ ವಿನ್ಯಾಸಗೊಳಿಸಿದ ಇ-ಆಡಳಿತ ತಂತ್ರಾoಶವನ್ನು ಉದ್ಘಾಟಿಸಿದ ನಂತರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ. ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೆ ಅವರ ಬೇಡಿಕೆಗಳಿಗನುಗುಣವಾಗಿ ಕಾರ್ಯನಿರ್ವಹಿಸಲು ಇ-ತಂತ್ರಾoಶ ಸಹಕಾರಿಯಾಗಲಿದೆ. ಕಡತಗಳ ಅನಗತ್ಯ ವಿಳಂಬವನ್ನು ತಪ್ಪಿಸಿ, ಆಡಳಿತದಲ್ಲಿ ಗುಣಮಟ್ಟವನ್ನು ಸುಧಾರಿಸುವಲ್ಲಿ, ಪಾರದರ್ಶಕತೆ ಕಂಡುಕೊoಡು ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ಸ್ಥಾಪಿಸಿ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಲಿದೆ. ಎಲ್ಲಾ ಅಧಿಕಾರಿಗಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ವದ ಉದ್ಧೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ ಎಂದ ಅವರು, ಇ-ಆಫೀಸ್ ಕಚೇರಿ ವ್ಯವಸ್ಥೆಯು ಸರಳೀಕೃತ, ಸ್ಪಂದಿಸುವ, ಪರಿಣಾಮಕಾರಿ, ಜವಾಭ್ದಾರಿಯುತ ಮತ್ತು ಪಾರದರ್ಶಕ ಕೆಲಸವನ್ನು ಸಾಧಿಸುವ ಮಾಧ್ಯಮವಾಗಿದೆ. ಇ-ಆಫೀಸ್‌ನ ವೇಗ ಮತ್ತು ದಕ್ಷತೆಯು ಇಲಾಖೆಗಳಿಗೆ ತಿಳುವಳಿಕೆಯುಳ್ಳ ಮತ್ತು ಕ್ಷಿಪ್ರ ನಿರ್ಧಾರಕ್ಕೆ ಸಹಕರಿಸುವುದಲ್ಲದೆ ಬಹುಮುಖ್ಯವಾಗಿ ಅವುಗಳನ್ನು ಕಾಗದ ರಹಿತವಾಗುವಂತೆ ಮಾಡಲಿದೆ ಎಂದು ತಿಳಿಸಿದರು.
Dr. Selvamani ಈ ಸಂದರ್ಭದಲ್ಲಿ ಸಮುದಾಯ ಸಂಪರ್ಕಾಧಿಕಾರಿ ಮೋಹನ್‌ಕುಮಾರ್, ಇ-ಆಫೀಸ್ ಸಂಪರ್ಕಾಧಿಕಾರಿ ಅನೂಪ್, ಜಿಲ್ಲಾ ನೋಡಲ್ ಅಧಿಕಾರಿ ಸುದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.