Hepatitis Disease ತಪಾಸಣೆ ಮತ್ತು ಸಕಾಲಿಕ ಚಿಕಿತ್ಸೆಯಿಂದ ಮಾರಣಾಂತಿಕವಾದ ಹೆಪಟೈಟಸ್‌ನ್ನು ಗುಣಪಡಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಅವರು ಹೇಳಿದರು.
ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಮೆಗ್ಗಾನ್ ಆಸ್ಪತ್ರೆಯ ಸಭಾಂಗಣದಲ್ಲಿ ರಾಷ್ಟೀಯ ವೈರಲ್ ಹೆಪಟೈಟಿಸ್ ನಿಯಂತ್ರಣದ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತಿಳುವಳಿಕೆಯ ಕೊರತೆಯಿಂದಾಗಿಯೇ ವಾರ್ಷಿಕವಾಗಿ ವಿಶ್ವದ ಸುಮಾರು 1.34ಮಿಲಿಯನ್‌ನಷ್ಟು ಜನ ಹೆಪಟೈಟಿಸ್ ಬಿ. ಮತ್ತು ಸಿ. ಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯ ಹಂತದಲ್ಲಿ ಈ ಕಾಯಿಲೆಯ ಗುಣಲಕ್ಷಣಗಳು ಕಂಡುಬರದಿರುವುದು ಇದಕ್ಕೆ ಕಾರಣವಾಗಿದೆ ಎಂದ ಅವರು ವೈರಲ್ ಹೆಪಟೈಟಿಸ್ ಟಿಬಿ, ಏಡ್ಸ್ ಅಥವಾ ಮಲೇರಿಯಾಕ್ಕಿಂತ ಹೆಚ್ಚು ಸಾವು-ನೋವುಗಳನ್ನು ಉಂಟು ಮಾಡುತ್ತಿದೆ ಎಂದವರು ನುಡಿದರು.
ಆರಂಭ ಹಂತದಲ್ಲಿದ್ದ ಈ ಕಾಯಿಲೆಗೆ ಚಿಕಿತ್ಸೆ ಸಕಾಲಿಕವಾಗಿ ದೊರೆಯದಿದ್ದಲ್ಲಿ ಅದು ಉಲ್ಬಣಗೊಂಡು ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರ್ ಆಗಿ ಪರಿಣಮಿಸಬಹುದಾದ ಸಾಧ್ಯತೆ ಇದೆ ಎಂದ ಅವರು, ಕೆಲವು ಸೋಂಕುಗಳು, ಆಲ್ಕೊಹಾಲ್, ಕೆಲವು ಔಷಧಗಳು ಸೇರಿದಂತೆ ವಿಷಕಾರಿ ವಸ್ತುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಸಹ ಹೆಪಟೈಟಿಸ್‌ಗೆ ಕಾರಣವಾಗಿವೆ ಎಂದ ಅವರು ಈ ಕಾಯಿಲೆಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದವರು ನುಡಿದರು.
ಸಕಾಲಿಕವಾಗಿ ಮಕ್ಕಳಿಗೆ ವ್ಯಾಕ್ಸಿನೇಶನ್ ಹಾಕುವ ಮೂಲಕ ನವಜಾತ ಶಿಶುಗಳಲ್ಲಿ ಉಂಟಾಗುವ ಹೆಪಟೈಟಿಸ್ ಸೋಂಕನ್ನು ನಿಯಂತ್ರಿಸಬಹುದಾಗಿದೆ. ತಾಯಿಯಿಂದ ಮಗುವಿಗೆ ಹರಡುವುದನ್ನು ನಿಲ್ಲಿಸಲು ಎಲ್ಲಾ ಗರ್ಭಿಣಿಯರು ಹೆಪಟೈಟಿಸ್ ಮತ್ತು ಏಡ್ಸ್ ನ್ನು ಪರೀಕ್ಷಿಸಿಕೊಂಡು ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಹೆಪಟೈಟಿಸ್‌ಗೆ ಸಕಾಲಿಕ ಚಿಕಿತ್ಸೆಯೇ ಪರಿಹಾರವಾಗಿದೆ. ಅಲ್ಲದೇ ಅಸುರಕ್ಷಿತ ಲೈಂಗಿಕತೆ, ಬಳಸಿದ ಸಿರೇಂಜ್‌ಗಳ ಬಳಕೆ, ವೈಯಕ್ತಿಕ ನೈರ್ಮಲ್ಯ ಅನುಸರಿಸದಿರುವುದು, ಸೋಂಕಿತ ವ್ಯಕ್ತಿಯ ವಸ್ತುಗಳ ಬಳಕೆ ಮಾಡದಿರುವುದು ಹೆಪಟೈಟಿಸ್‌ನಿಂದ ದೂರವಿರುವ ಸರಳ ವಿಧಾನ ಇದಾಗಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಸಿದ್ಧನಗೌಡ ಪಾಟೀಲ್ ಅವರು ಮಾತನಾಡಿ, ವೈದ್ಯಕೀಯ ಪ್ರಶಿಕ್ಷಣಾರ್ಥಿಗಳು ಈ ಕಾಯಿಲೆಯ ಪ್ರಾಥಮಿಕ ಅರಿವು ಹೊಂದಿರುವುದು ಹಾಗೂ ತಪಾಸಣೆ ಹಂತದಲ್ಲಿ ಕಾಯಿಲೆಯನ್ನು ಗುರುತಿಸಿ, ಚಿಕಿತ್ಸೆಗೆ ಪ್ರೋತ್ಸಾಹಿಸುವುದು ಕ್ಷೇಮ ಎಂದರು.
ಸಾಮಾಜಿಕವಾಗಿ ಎಲ್ಲರೂ ದೈಹಿಕವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆಯೇ ಗುಣಮಟ್ಟದ ಆಹಾರ, ಶುದ್ಧ ನೀರು ಹಾಗೂ ಉತ್ತಮ ವಾತಾವರಣ ನಿರ್ಮಿಸುವುದು ಕೂಡ ನಿಯಂತ್ರಣ ಕ್ರಮದ ಭಾಗವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಅರವಿಂದ್ ಮತ್ತು ಡಾ. ಮುರಳಿ ಅವರು ಹೆಪಟೈಟಿಸ್ ಕಾಯಿಲೆಯ ಸುರಕ್ಷತಾ ಕ್ರಮಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು.
Hepatitis Disease ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ. ಶ್ರೀಧರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ನಾಗಲೀಕರ್, ಆರ್.ಸಿ.ಹೆಚ್. ಅಧಿಕಾರಿ ಡಾ. ನಾಗರಾಜನಾಯ್ಕ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ದಿನೇಶ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿ-ಸಿಬ್ಬಂಧಿಗಳು, ವೈದ್ಯಕೀಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.