Uttaradi Mutt ಹೊಳೆಹೊನ್ನೂರು : ಭಗವಂತನಲ್ಲಿ ಮತ್ತು ಭಗವಂತನ ಅನಂತ ಗುಣಗಳ ಬಗ್ಗೆ ವಿರಕ್ತರಾಗಿದ್ದೇವೆ ಎಂದರೆ ಸುಖದಿಂದಲೂ ವಿರಕ್ತರಾಗಿದ್ದೇವೆ ಎಂದೇ ಅರ್ಥ ಎಂದು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಜಗತ್ತಿನ ಸುಖಸಾಧನನಾದ ಪರಮಾತ್ಮನ ಗುಣಗಳ ಕೀರ್ತನೆಯನ್ನು ಸುಖಸಾಧನ ಆಗುವ ರೀತಿಯಲ್ಲಿ ಅರ್ಥಮಾಡಿಕೊಂಡು ಶ್ರವಣ ಮಾಡಬೇಕೇ ಹೊರತು ಭಗವಂತನಲ್ಲಿ ನಾವು ವಿರಕ್ತಿ ಹೊಂದಬಾರದು. ಲೌಖಿಕ ವಿಷಯ ಭೋಗಗಳಲ್ಲಿ ವೈರಾಗ್ಯ ವಿರಬೇಕೇ ಹೊರತು ದೇವರಲ್ಲಿ ಅಲ್ಲ ಎಂದರು.
ನಮಗೆ ಭಗವಂತ ಮಾಡಿರುವ ಉಪಕಾರಗಳ ಸ್ಮರಿಸಿ ಆತನ ಉಪಾಸನೆ ಮಾಡಬೇಕು. ಅದು ಬಿಟ್ಟು ಕೇವಲ ಉದ್ದೇಶ ಈಡೇರಿಕೆಗಾಗಿ ದೇವರ ಸ್ಮರಣೆ ಸಲ್ಲದು. ತಂದೆಯನ್ನು ಹೊಗಳಿದರೆ ಪಿತೃಭಕ್ತನಾದ ಪುತ್ರನಿಗೆ ಹೇಗೆ ಸಂತೋಷವಾಗುತ್ತದೆಯೋ ಹಾಗೆ ಎಲ್ಲರ ತಂದೆ ಎನಿಸಿರುವ ದೇವರ ಕಥೆಯನ್ನು ಕೇಳುವುದರಿಂದ ನಮಗೆ ಆನಂದವಾಗಬೇಕು. ಅದರಲ್ಲೂ ದಶಮ ಸ್ಕಂದದಲ್ಲಿ ಬರುವ ಶ್ರೀಕೃಷ್ಣನ ಕಥೆ ಮೋಕ್ಷ ಸಾಧನ ಎಂದರು.
Uttaradi Mutt ಇದಕ್ಕೂ ಪೂರ್ವದಲ್ಲಿ ಮುಕುಂದಾಚಾರ್ಯ ರಾಯಚೂರು ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ರಾಮಧ್ಯಾನಿ ಅನಿಲ್, ಗುರುರಾಜ್ ಮೊದಲಾದವರಿದ್ದರು.