ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರುಗಳ ಕೊರತೆ ಇದ್ದು 3000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಪರವಾನಗಿ ನೀಡಲಾದ ಭೂಮಾಪಕರಿಗೆ ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಪ್ರಕಾರ ಪ್ರತಿ ಅಳತೆ ಕಾರ್ಯಕ್ಕೆ ಇಲಾಖೆಯಿಂದ ಸೇವಾ ಶುಲ್ಕವನ್ನು ನೀಡಲಾಗುವುದು. ಭೂಮಾಪನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ 2022 ರ ಜನವರಿ ಅಥವಾ ಫೆಬ್ರವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಪರೀಕ್ಷೆಯ ಖಚಿತ ದಿನಾಂಕವನ್ನು ವೆಬ್‍ಸೈಟ್ ವಿಳಾಸ rdservices.karnataka.gov.in ರಲ್ಲಿ ಮತ್ತು ದಿನಪತ್ರಿಕೆಗಳಲ್ಲಿ 15 ದಿನ ಮುಂಚಿತವಾಗಿ ಪ್ರಚುರಪಡಿಸಲಾಗುವುದು. ನಿಗದಿಪಡಿಸಲಾದ ಅರ್ಜಿಗಳನ್ನು ಮೇಲ್ಕಂಡ ಇಲಾಖಾ ವೆಬ್‍ಸೈಟಿನಲ್ಲಿಯೇ ಪ್ರಕಟಿಸಲಾಗಿದ್ದು ಆನ್‍ಲೈನ್ ಮುಖಾಂತರ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಆನ್‍ಲೈನ್‍ನಲ್ಲಿ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿರುತ್ತದೆ.
ಅರ್ಜಿ ಶುಲ್ಕ ರೂ.1000 ಆಗಿದ್ದು ಇಲಾಖಾ ವೆಬ್‍ಸೈಟ್ rdservices.karnataka.gov.in ನಲ್ಲಿ ಕ್ಲಿಕ್ ಮಾಡಿದಾಗ ಆನ್‍ಲೈನ್ ಅರ್ಜಿ ಲಿಂಕ್ ಮೂಡುತ್ತದೆ. ಅಧಿಸೂಚನೆಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.
ಕನಿಷ್ಟ ಪದವಿಪೂರ್ವ ಶಿಕ್ಷಣ(ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ(ಸಿವಿಲ್)/ಅಥವಾ ಬಿ.ಟೆಕ್(ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇಯಲ್ಲಿ ಪದವಿಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್‍ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.
ವಯೋಮಿತಿ ಕನಿಷ್ಟ 18 ವರ್ಷ, ಗರಿಷ್ಟ 65 ವರ್ಷ ಮೀರಿರಬಾರದು. ಜಿಲ್ಲಾವಾರು ಅವಶ್ಯಕವಿರುವ ಭೂಮಾಪಕರ ಸಂಖ್ಯೆ ನಿಗದಿಪಡಿಸಿದ್ದು ಶಿವಮೊಗ್ಗ ಜಿಲ್ಲೆಗೆ 127 ಸಂಖ್ಯೆ ನಿಗದಿಪಡಿಸಲಾಗಿದೆ. ಅರ್ಹತಾ ಷರತ್ತುಗಳು, ಆಯ್ಕೆಯ ವಿಧಾನ, ತರಬೇತಿ ಸೇರಿದಂತೆ ಇತರೆ ಸೂಚನೆಗಳಿಗೆ ಇಲಾಖಾ ವೆಬ್‍ಸೈಟ್‍ನಲ್ಲಿ ಮಾಹಿತಿ ಪಡೆಯಬಹುದು ಎಂದು ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ, ಬೆಂಗಳೂರು ಪ್ರಕಟಣೆ ತಿಳಿಸಿದೆ.
ಪರವಾನಗಿ ಭೂಮಾಪಕರ ಆಯ್ಕೆಗೆ ಅರ್ಜಿ ಆಹ್ವಾನ
Date: