DVS Arts and Science college ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಅಪರಾಧ ಕೃತ್ಯಗಳ ಸಾಕ್ಷಿ ಪತ್ತೆ ಹಚ್ಚಬಹುದು. ಆದರೆ ಅಪರಾಧಿ ಕೃತ್ಯಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಗೆ ನೆರವು ನೀಡಬಲ್ಲ ಮಹತ್ತರ ವಿಭಾಗ ಇದಾಗಿದೆ ಎಂದು ಬೆಂಗಳೂರಿನ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಡಾ. ವಿಶ್ವನಾಥ್ ಎಸ್.ವಿ. ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ “ವಿಧಿ ವಿಜ್ಞಾನ ಮತ್ತು ಅನ್ವಯ” ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ರಕ್ತದ ಮಾದರಿ ಮಹತ್ತರ ಪಾತ್ರ ವಹಿಸುತ್ತದೆ. ಕೂದಲಿನ ಮಾದರಿ ಹಾಗೂ ಲಭ್ಯವಿರುವ ಸಾಕ್ಷಿಗಳಿಂದ ಸಿಗುವ ಅಂಶಗಳ ಬಗ್ಗೆ ಪೊಲೀಸ್ ಇಲಾಖೆಗೆ ವರದಿ ನೀಡಬಹುದು. ಇದರಿಂದ ಬಹುತೇಕ ಪ್ರಕರಣಗಳ ಸುಲಭ ಪತ್ತೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಜಂಟಿ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಮಹತ್ತರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಕ್ಷೇತ್ರದಲ್ಲಿ ಇರುವ ಅವಕಾಶಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಬೇಕು ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಖಜಾಂಚಿ ಬಿ.ಗೋಪಿನಾಥ್ ಮಾತನಾಡಿ, ಅಧ್ಯಯನ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧಕರ ಮಾರ್ಗದರ್ಶನ ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳು ಪರಿಣಿತರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೇಕು. ಮೊಬೈಲ್ ಹಾಗೂ ತಂತ್ರಜ್ಞಾನ, ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಅಪರಾಧ ಕೃತ್ಯಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲು ಸಾಧ್ಯ ಎಂದು ಹೇಳಿದರು.
DVS Arts and Science college ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ. ಕುಮಾರಸ್ವಾಮಿ.ಎನ್, ಸಂಹಿತಾ ಮಹಿಮಾ ಆರ್., ಡಾ. ಸಂತೋಷ್ ಎಂ., ಡಾ. ಶಿವಶಂಕರ್ ಕಿನ್ನಾಳ್, ಸಹನಾ ತಾಜ್, ಪ್ರವೀಣ್, ಆಂಜನೇಯ, ಅರುಣ್ ಕುಮಾರ್ ಉಪಸ್ಥಿತರಿದ್ದರು.