Dr. Selvamani R ಮಕ್ಕಳ ಪೋಷಣೆ, ರಕ್ಷಣೆ, ಬೆಳವಣಿಗೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳು ತಮ್ಮ ಮನಸ್ಸನ್ನು ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಹೋಗದಂತೆ ಕೇಂದ್ರೀಕರಿಸಿ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಶಿಕ್ಷಕರು ಗಮನಹರಿಸುವಂತೆಯೇ ಅವರು ಮಕ್ಕಳಿಗೆ ದೊರೆಯಬೇಕಾದ ಸೌಲಭ್ಯಗಳು ಮತ್ತು ಅವರ ಅನಾನುಕೂಲತೆಗಳ ಬಗ್ಗೆಯೂ ಶಿಕ್ಷಕರು ಗಮನಹರಿಸುವ ಅಗತ್ಯವಿದೆ ಎಂದವರು ನುಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ಕೇಳಿಬರುವ ಬಾಲ್ಯವಿವಾಹ ನಿಯಂತ್ರಣವೂ ಶಿಕ್ಷಕರ ಹೊಣೆಗಾರಿಕೆಗಳಲ್ಲೊಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಬಹುತೇಕ ಘಟನಾವಳಿಗಳು ಶಿಕ್ಷಕರ ಕಣ್ಣಂಚಿನಲ್ಲಿ ಗೋಚರಿಸುವಂತದ್ದಾಗಿದೆ. ಬಾಲ್ಯವಿವಾಹದಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಪ್ರಕರಣಗಳ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ವಿಷಯ ತಲುಪಿಸುವುದು, ನಿಯಂತ್ರಿಸುವಲ್ಲಿ ಕ್ರಮವಹಿಸುವುದು ಕೂಡ ಶಿಕ್ಷಕರ ಕರ್ತವ್ಯವಾಗಿದೆ ಎಂದವರು ನುಡಿದರು.
ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಕ್ರೌರ್ಯ ಮತ್ತು ಲೈಂಗಿಕ ದೌರ್ಜನ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಇಂತಹ ವಿಷಯಗಳ ಕುರಿತು ಜನರಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿರುತ್ತದೆ. ಇದರಿಂದ ವಿಮುಖನಾಗುವುದು ನೈಜ ಶಿಕ್ಷಕನ ಲಕ್ಷಣವಲ್ಲ ಎಂದವರು ನುಡಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ನಿರೀಕ್ಷೆಯಂತಿಲ್ಲ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಿ, ಶೇ. 100 ಫಲಿತಾಂಶ ತರುವಲ್ಲಿ ವಿಶೇಷ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮಾತನಾಡಿ, ಸೀಮಿತ ಪ್ರದೇಶದಲ್ಲಿರುವ ಸರ್ಕಾರದ ಪ್ರಮುಖ ಘಟಕ ಶಾಲೆಗಳು. ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿ ಶಿಕ್ಷಕರು ಸಾರ್ವಜನಿಕರೊಂದಿಗೆ ಸದಾ ಸಂಪರ್ಕ ಹೊಂದಿದೆ. ಸಾಮಾಜಿಕ ಪಿಡುಗಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕೆಂದವರು ನುಡಿದರು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕಾಗಿ ಸರ್ಕಾರದ ಎಲ್ಲಾ ಶಾಲೆಗಳ ಶಿಕ್ಷಕರು ವಿಶೇಷ ಗಮನಹರಿಸಿ, ಜಿಲ್ಲೆಯನ್ನು ರಾಜ್ಯದ ಮೇಲ್ಪಂಕ್ತಿಯ ೫ಜಿಲ್ಲೆಗಳಲ್ಲಿ ಗುರುತಿಸುವಂತೆ ಮಾಡಬೇಕು. ಅದಕ್ಕಾಗಿ ಶಿಕ್ಷಕರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಸ್ವಾಗತಿಸಿದರು. ಡಯಟ್ ಪ್ರಾಂಶುಪಾಲ ಬಸವರಾಜಪ್ಪ ಬಿ.ಆರ್., ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ರಾಘವೇಂದ್ರ, ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ವಿಷಯ ಪರಿವೀಕ್ಷಕ ಸತೀಶ್ ಎಂ. ಅವರು ನಿರೂಪಿಸಿ, ಶಿವನಗೌಡ ಎಂ. ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಲಾ 25,000/-ರೂ.ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
Dr. Selvamani R ನಂತರ ಮಕ್ಕಳ ಹಕ್ಕುಗಳು, ಮಾದಕ ದ್ರವ್ಯಗಳ ನಿಷೇಧ ಮತ್ತು ಸೈಬರ್ ಕ್ರೈಮ್ ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯ್ದೆ ಅನುಷ್ಠಾನದ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.