International Yoga Day ಯೋಗದಿಂದ ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡಾಗ ದಿನನಿತ್ಯದ ಕೆಲಸ-ಕಾರ್ಯಗಳನ್ನು ನಿರೀಕ್ಷೆಯಂತೆ ನಿರ್ವಹಿಸಲು, ಸದಾ ಲವಲವಿಕೆಯಿಂದಿರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಉತ್ತಮ ಎಂದು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗಪಟು ಅನಿಲ್ ಕುಮಾರ್ ಹೆಚ್. ಶೆಟ್ಟರ್ ಹೇಳಿದರು.
ಅವರು ಗುರುಪುರದ ಬಿಜಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕೇವಲ ಭಾರತವಲ್ಲದೆ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಇದರ ರೂವಾರಿಯಾಗಿದ್ದು ಈಗ ಭಾರತದ ಯೋಗ ವಿಶ್ವದ ತುಂಬಾ ಹರಡಿದೆ ಎಂದರು.
ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ದಶಕದಿಂದೀಚೆಗೆ ಯೋಗದ ಮಹತ್ವದ ಜನರಿಗೆ ಅರಿವಾಗಿದ್ದು, ಹೆಚ್ಚಿನ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಯೋಗಾಭ್ಯಾಸದ ಕಡೆಗೆ ಒಲವು ಹೊಂದಿದ್ದಾರೆ ಎಂದರು.
International Yoga Day ಯೋಗಾಸನದ ಮೂಲಕ ಶರೀರ, ಮನಸ್ಸು ಮತ್ತು ನರ-ನಾಡಿಗಳನ್ನು ಸದಾ ಕ್ರಿಯಾಶೀಲವಾಗಿಡುವಲ್ಲಿ ಸಹಕಾರಿಯಾಗದೇ ಮಾತ್ರವಲ್ಲ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಪಿತ್ತಕೋಶ, ಕಿಡ್ನಿ ಮುಂತಾದವುಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಯೋಗಾಭ್ಯಾಸ ಉತ್ತಮವಾದುದಾಗಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್., ಯೋಗಶಿಕ್ಷಕ ಬಸವರಾಜ್, ಶಿಕ್ಷಕರಾದ ಹರೀಶ್ ಸೇರಿದಂತೆ ಮತ್ತಿತರರಿದ್ದರು.