Madhu Bangarappa ಶಿವಮೊಗ್ಗ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪೂರೈಸಲು ನೀರಿನ ಕೊರತೆ ಉಂಟಾಗಬಹುದಾದ ಸಾಧ್ಯತೆ ಇದ್ದು, ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಬರ, ಪ್ರಕೃತಿ ವಿಕೋಪ, ಕೃಷಿ ಚಟುವಟಿಕೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವಿವಿಧ ಕ್ಷೇತ್ರಗಳ ಸ್ಥಿತಿಗಳ ಮಾಹಿತಿ ಪಡೆದು ಮಾತನಾಡುತ್ತಿದ್ದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು ಇನ್ನೂ 20 ದಿನಗಳಿಂದ ಒಂದು ತಿಂಗಳವರೆಗೆ ಕುಡಿಯುವ ನೀರಿನ ಪೂರೈಕೆ ಸಾಧ್ಯವಾಗಲಿದೆ.
ಈ ಅವಧಿಯಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಈಗಾಗಲೇ ಜಿಲ್ಲೆಯ 80-90ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದನ್ನು ಗುರುತಿಸಲಾಗಿದೆ.
ಪ್ರಸ್ತುತ 25ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದರು.
Madhu Bangarappa ಪ್ರತಿ ಬಾರಿಯೂ ಮಳೆ ಬಾರದಿದ್ದರೆ ಉಂಟಾಗುವ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ತುರ್ತು ಅನಿವಾರ್ಯತೆ ಇದೆ. ಜಿಲ್ಲೆಯ ಸೊರಬ ಹೊರತುಪಡಿಸಿ, ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ. ಈವರೆಗೆ ಈ ಯೋಜನೆಯ ಮಂಜೂರಾತಿಗೊಂಡು ಅಪೂರ್ಣಗೊಂಡಿದ್ದಲ್ಲಿ ಅವುಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದಾಗಿ ಹಣಕಾಸಿನ ಅಪವ್ಯಯ ಹಾಗೂ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಬಹುದಾಗಿದೆ ಎಂದ ಅವರು ಈ ವಿಷಯದ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣ ಅವರು ಮಾತನಾಡಿ, ಸೊರಬ ತಾಲೂಕಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಅನುದಾನದ ಕೊರತೆ ಇದೆ. ತಾವು ಅನುಮತಿ ನೀಡಿದ್ದಲ್ಲಿ 15ನೇ ಹಣಕಾಸು ಯೋಜನೆಯಡಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವುದಾಗಿ ಅವರು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಆಗಾಗ್ಗೆ ಅತೀವೃಷ್ಠಿ, ಅನಾವೃಷ್ಠಿಗೊಳಗಾಗುವ ಪ್ರದೇಶಗಳಲ್ಲಿ ಶಾಶ್ವತ ಸುರಕ್ಷತಾ ಕ್ರಮ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು, ಪ್ರಕೃತಿ ವಿಕೋಪದ ಸಂತ್ರಸ್ಥರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ಹಾಗೂ ವೈದ್ಯಕೀಯ ನೆರವನ್ನು ಒದಗಿಸುವಂತೆ ಹಾಗೂ ವಾಸ್ತವ ಸ್ಥಿತಿಗತಿಗಳನ್ನು ಅರಿತು ಪಕ್ಷಾತೀತವಾಗಿ ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ಜಿಲ್ಲೆಯಾದ್ಯಂತ ಕಂಡುಬಂದಿದ್ದು, ತೋಟಗಾರಿಕೆ ಬೆಳೆಗಾರರಿಗೆ ಆತಂಕ ಉಂಟುಮಾಡಿದ್ದ ಎಲೆಚುಕ್ಕಿ ರೋಗ ಪ್ರಸಕ್ತ ಸಾಲಿನಲ್ಲಿಯೂ ಗೋಚರಿಸಬಹುದಾದ ಸಂಭವವಿದ್ದು, ಅದರ ನಿಯಂತ್ರಣಕ್ಕೆ ಸಕಾಲಿಕ ಕ್ರಮ ಕೈಗೊಳ್ಳಲು ಸದಾ ಸಿದ್ಧರಾಗಿರುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಔ಼ಷಧಗಳನ್ನು ದಾಸ್ತಾನಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಾಡಿಕೆ ಪ್ರಮಾಣದ ಮಳೆ ಬಾರದಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯುಂಟಾಗಿದೆ ಮಾತ್ರವಲ್ಲ ಕೃಷಿಕರಲ್ಲಿ ಆತಂಕದ ಛಾಯೆ ಮೂಡಿದೆ. ಅದರ ಪರ್ಯಾಯ ಕ್ರಮವಾಗಿ ಮೋಡಬಿತ್ತನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದ ಅವರು, ಉಳಿದಂತೆ ಕೃಷಿ ಕಾರ್ಯಗಳಿಗೆ ಅಗತ್ಯವಿರುವ ಔಷಧ, ಗೊಬ್ಬರ ಹಾಗೂ ಬಿತ್ತನೆಬೀಜ ದಾಸ್ತಾನಿದೆ ಎಂದರು.
ಪ್ರತಿ ನಿತ್ಯ ಹೆಚ್ಚಿನ ವ್ಯಾಸಂಗಕ್ಕಾಗಿ ಊರಿಂದೂರಿಗೆ ಪ್ರಯಾಣ ಸುವ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆಯಿಂದಾಗಿ ಪ್ರಯಾಣ ಕಷ್ಟವಾಗುತ್ತಿದೆ. ಈ ಕೊರತೆಯನ್ನು ನೀಗಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ಶಿಕ್ಷಕರ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಶೀಘ್ರದಲ್ಲಿ ಇತ್ಯರ್ಥಗೊಳ್ಳುವ ವಿಶ್ವಾಸವಿದೆ. ನೇಮಕಾತಿಗೊಳ್ಳುವ ಅರ್ಹ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಶೀಘ್ರದಲ್ಲಿ ಕ್ರಮ ವಹಿಸಲಾಗುವುದು ಎಂದರು.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಉಂಟಾಗುವ ಮಾನವ ಹಾಗೂ ಜಾನುವಾರು ಜೀವಹಾನಿ ಪ್ರಕರಣಗಳಿಗೆ ತಕ್ಷಣದ ಪರಿಹಾರ ನೀಡಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು