World Environment Day ವಿಶ್ವ ಪರಿಸರದ ಹಾರ್ದಿಕ ಶುಭಕಾಮನೆಗಳೊಂದಿಗೆ ಆರು ಹನಿಗವಿತೆಗಳು ಒಪ್ಪಿಸಿಕೊಳ್ಳಿ.. ಇಲ್ಲಿ ಪರಿಸರದ ಕಾಳಜಿಯಿದೆ. ವಾಸ್ತವದ ಅನಾವರಣವಿದೆ. ವ್ಯಂಗ್ಯ, ವಿಡಂಬನೆ, ವಿಷಾದ ಎಲ್ಲವೂ ಇದೆ. ಪ್ರತಿಯೊಬ್ಬರಲ್ಲೂ ಪರಿಸರ ಪ್ರಙ್ನೆ ಜಾಗೃತವಾಗಿ, ಸಂರಕ್ಷಣೆಗೆ ಕಟಿಬದ್ದರಾಗಿ ಕಾರ್ಯಪ್ರವೃತ್ತರಾದಲ್ಲಿ ಇಳೆಯ ಕಣಕಣವೂ ಹಸಿರಾದೀತು. ನಾಳಿನ ಪೀಳಿಗೆಗೂ ಉಸಿರಾದೀತು.. ಏನಂತೀರಾ..?”- ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
- ವಿಕೋಪ..!
ಬಾಗುವ ಸಂಸ್ಕೃತಿಗೆ ಒಲಿದು
ಕಾಪಿಟ್ಟು ಪೊರೆವುದು ಪ್ರಕೃತಿ
ಬೀಗುವ ವಿಕೃತಿಗೆ ಮುನಿದು
ಕಾಣಿಸುವುದೊಮ್ಮೆಗೆ ಅವನತಿ.!
- ವಿನಂತಿ..!
ಇಂದು ವಿಶ್ವ ಪರಿಸರ ದಿನದಂದು
ಮಿತ್ರ ಬೆಳಗಿನಿಂದ ಸಂಜೆಯವರೆಗೂ
ಆನ್ಲೈನಿನಲ್ಲಿ ಗಿಡ ನೆಟ್ಟಿದ್ದು ಸಾಕು.
ಇನ್ನಾದರೂ ಮೇಲೆದ್ದು ಬಾಲ್ಕನಿಯ
ಹೂಕುಂಡಗಳಿಗೆ ಸ್ವಲ್ಪ ನೀರು ಹಾಕು.!
- ಕಂಬನಿ.!
ಕವಿ ಬರೆದ ಪ್ರತಿ ಹಾಳೆಯಲೂ
ಜಿನುಗಿ ಮಿನುಗುತ್ತಿದ್ದ ಹನಿಗಳು
ಶಾರದೆಯ ಆನಂದ ಬಾಷ್ಪಗಳಲ್ಲ
ಅದು ವೃಕ್ಷಮಾತೆಯ ಕಣ್ಣೀರು.!
- World Environment Day ಸಂರಕ್ಷಣೆ..!
ಕಾಡು ಉಳಿಸುವ ನಿಮ್ಮಯ
ಆಂದೋಲನ ಸ್ವಲ್ಪ ಬದಿಗಿಡಿ
ಮೊದಲು ಮನೆಯ ಮುಂದಿನ
ಮರ ಕಡಿಯದಂತೆ ಕಣ್ಣಿಡಿ.!
- ಪರಿಣಾಮ.!
ಕಾಡು ಕಡಿದು ನಾಡು ಮಾಡಿ
ಮರ ಬೀಳಿಸಿ ಲೇಔಟ್ ಏಳಿಸಿ
ದುಡ್ಡು ಮಾಡುವ ದಿನಮಾನ
ಬದಲಾಗದಿದ್ದೀತೆ ಋತುಮಾನ
ಏರದಿದ್ದೀತೆ ಜಾಗತಿಕ ತಾಪಮಾನ.?
- ವಿಷಾದ.!
ಮಕ್ಕಳ ಸಾಕುವ ಬದಲು
ನಾಲ್ಕು ಮರ ಬೆಳೆಸಿದ್ದರೆ
ಚೆನ್ನಿರುತ್ತಿತ್ತೇನೋ ವೃದ್ದಾಪ್ಯ
ಮಾತುಕತೆ ಇಲ್ಲದಿದ್ದರೂ..
ಅವು ಕನಿಷ್ಟ ವಿದೇಶಕ್ಕಂತೂ
ಹಾರುತ್ತಿರಲಿಲ್ಲ ತೊರೆದು ಸಖ್ಯ.!
ಹೂ-ಹಣ್ಣು ನೆರಳುಗಳಿಡುತ
ನಮ್ಮ ಕಾಯುತ್ತಿದ್ದವು ಪ್ರತಿನಿತ್ಯ.!
ಎ.ಎನ್.ರಮೇಶ್. ಗುಬ್ಬಿ.