DC Chikkamagaluru ನಿವೇಶನ ರಹಿತರು ವಾಸಿಸುವ ಗುಡಿಸಲಿನ ಜಾಗವನ್ನು ಭೂಕಬಳಿಕೆ ಮಾಡುವ ಹುನ್ನಾರದಿಂದ ಕೆಲವು ಕಿಡಿಕೇಡಿಗಳು ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಾನಿಗೊಳಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ದಸಂಸ ಮುಖಂಡರುಗಳು ಮನವಿ ಸಲ್ಲಿಸಿ ಗುಡಿಸಲುಗಳನ್ನು ಸುಟ್ಟು ನಿವಾಸಿಗಳಿಗೆ ತೊಂದರೆ ನೀಡುತ್ತಿವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮರ್ಲೆ ಅಣ್ಣಯ್ಯ ತರೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಎಂಸಿಹಳ್ಳಿ ಪಂಚಾಯತಿ ವ್ಯಾಪ್ತಿಯ ಎಸ್.ರಂಗಾಪುರ ಗ್ರಾಮದಲ್ಲಿ ನಿವೇಶನಕ್ಕೆ ಬೇಡಿಕೆ ಇಟ್ಟುಕೊಂಡು ಸುತ್ತಮುತ್ತಲಿನ ಗ್ರಾಮಸ್ಥರು ದಸಂಸ ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು.
ನಿವೇಶನದ ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರಿಗಾಗಿ ಗ್ರಾಮಸ್ಥರು ತಮ್ಮ ಸ್ವತಃ ಖರ್ಚಿನಲ್ಲಿ ಬೋರ್‌ವೇಲ್ ಕೊರೆಸಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ನಂತರ ಹಕ್ಕುಪತ್ರ ನೀಡಬೇಕೆಂದು ತರೀಕೆರೆ ಉಪವಿಭಾಗಾ ಧಿಕಾರಿ, ತಹಶೀಲ್ದಾರ್ ಅವರಿಗೆ ಪ್ರತಿಭಟನೆ ಮೂಲಕ ಮನವಿ ನೀಡಲಾಗಿದೆ.
DC Chikkamagaluru ಅಧಿಕಾರಿಗಳು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರೂ ಸಂಬಂಧಪಟ್ಟವರು ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಅಸಡ್ಡೆ ತೋರ ಲಾಗುತ್ತಿದೆ ಎಂದರು.
ನಿವೇಶನ ನೀಡುವ ವಿಚಾರದಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ಒಂದೆಡೆಯಾದರೆ ನಿವೇಶನ ರಹಿತರ ಜಾಗವನ್ನು ಖಾಲಿ ಮಾಡಿಸುವ ಉದ್ದೇಶದಿಂದ ಭೂಗಳ್ಳರು ಇತರೆಡೆಯಿಂದ ಕಿಡಿಕೇಡಿಗಳನ್ನು ಕರೆತಂದು ನಿವೇಶನ ರಹಿತರಿರುವ ಜಾಗಕ್ಕೆ ತೆರಳಿ ಬೆದರಿಕೆ ಹಾಕುವ ಜೊತೆಗೆ ಗುಡಿಸಲುಗಳಿಗೆ ಬೆಂಕಿ ಹಾಕಲಾಗುತ್ತಿದೆ. ಚುನಾವಣೆ ಮುಗಿದ ನಂತರ ಪುಂಡರ ಹಾವಳಿ ಇನ್ನಷ್ಟು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಎಂಸಿ ಹಳ್ಳಿ ಹಾಗೂ ಸುತ್ತಮುತ್ತಲಿನ ಗುಡಿಸಲಿನಲ್ಲಿ ವಾಸವಿರುವ ನಿವೇಶನ ರಹಿತರ ಸಮಸ್ಯೆ ಗಳನ್ನು ಬಗೆಹರಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸಿ ಬೇಡಿಕೆ ಈಡೇರಿಸಬೇಕು ಹಾಗೂ ಭೂಗ್ಗಳರಿಂದ ನಿವೇಶನ ರಹಿತರಿಗೆ ರಕ್ಷಣೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಖಜಾಂಚಿ ಸಂತೋಷ್, ತರೀಕೆರೆ ತಾಲ್ಲೂಕು ಸಂಚಾಲಕ ರಾಮಚಂದ್ರ, ಸಹ ಸಂಘಟನಾ ಸಂಚಾಲಕ ಮೌಂಟ್ ಬ್ಯಾಟನ್, ಮುಖಂಡರುಗಳಾದ ಮಂಜುನಾಥ್, ಕೊಪ್ಪ ಶೇಖರ್, ಸುಜೇಂದ್ರ ಲಕ್ಯಾ ಮತ್ತಿತರರು ಹಾಜರಿದ್ದರು.