Special Campaign to Cancel Fake GST Number ಸುಳ್ಳು ಮಾಹಿತಿ ಸಲ್ಲಿಸಿ ಪಡೆದ ಜಿಎಸ್‌ಟಿ ಸಂಖ್ಯೆಗಳನ್ನು ರದ್ದುಪಡಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ವಿಶೇಷ ಅಭಿಯಾನ ನಡೆಸುತ್ತಿದೆ. ದೇಶಾದ್ಯಂತ ದಾಖಲೆಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತೆರಿಗೆ ಸಲಹೆಗಾರ ವಿನಯ್ ಜಿ.ಹೆಗಡೆ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ ಜಿಎಸ್‌ಟಿ ನಕಲಿ ನೋಂದಣಿ, ಜಿಎಸ್‌ಟಿ ರಿಟರ್ನ್ಸ್ ನಿಯಮಗಳ ಪಾಲನೆ, ಇ-ಬಿಲ್ ಸಿದ್ಧತೆ” ವಿಷಯ ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಎಸ್‌ಟಿ ಪಡೆಯುವ ಸಂದರ್ಭದಲ್ಲಿ ಸಲ್ಲಿಸಿರುವ ಸ್ಥಳ ಹಾಗೂ ನಿರ್ವಹಣೆ ಮಾಡುತ್ತಿರುವ ದಾಖಲೆಗಳು ಸರಿಯಾಗಿದಿಯೇ ಎಂಬುದರ ಬಗ್ಗೆ ಎರಡು ತಿಂಗಳ ಕಾಲ ವಿಶೇಷವಾಗಿ ಅಭಿಯಾನ ನಡೆಯುತ್ತಿದೆ. ಸಮರ್ಪಕ ದಾಖಲೆಗಳ ಮೂಲಕ ಜಿಎಸ್‌ಟಿ ಪಡೆದಿರುವವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಜಿಎಸ್‌ಟಿ ರಿಟರ್ನ್ಸ್ ಕುರಿತಾಗಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಸೂಚನೆ ಹೊರಡಿಸಿದ್ದು, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ಸಂದರ್ಭಗಳಲ್ಲಿ ಎಲ್ಲ ಅಂಶಗಳನ್ನು ಪಾಲಿಸಬೇಕು. ಇ-ಬಿಲ್ ಸಿದ್ಧತೆ ಬಗ್ಗೆ ತಿಳವಳಿಕೆ ಹೊಂದಬೇಕು. ಮುಂದಿನ ದಿನಗಳಲ್ಲಿ ಇ-ಬಿಲ್ ವ್ಯವಸ್ಥೆ ಅಗತ್ಯವಾಗಿ ಬೇಕಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಭಾರತ ದೇಶವು ವಿಶ್ವದಲ್ಲಿಯೇ ಐದನೇ ಬೃಹತ್ ಆರ್ಥಿಕ ಶಕ್ತಿ ಹೊಂದಿರುವ ರಾಷ್ಟ್ರವಾಗಿ ಬೆಳೆದಿದ್ದು, ಕೇಂದ್ರ ಸರ್ಕಾರವು ವಿಶೇಷ ಕಾರ್ಯಕ್ರಮ ಹಾಗೂ ರೂಪುರೇಷೆಗಳ ಮೂಲಕ ಆರ್ಥಿಕ ಸದೃಢತೆ ಸಾಧಿಸಲು ಕ್ರಮ ವಹಿಸಿದೆ ಎಂದು ಹೇಳಿದರು.
ಜಿಎಸ್‌ಟಿ ಜಾರಿ ಆಗಿರುವ ನಂತರದಲ್ಲಿ ಕೆಲ ಗೊಂದಲಗಳ ಬಗ್ಗೆ ಇನ್ನೂ ಉದ್ಯಮಿಗಳಿಗೆ ಪರಿಹಾರ ಸಿಕ್ಕಿಲ್ಲ. ಉದ್ಯಮದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ತ ತಿಳವಳಿಕೆ ಹೊಂದುವ ಅವಶ್ಯಕತೆ ಇದೆ. ಜಿಎಸ್‌ಟಿ ಕುರಿತಾಗಿ ಎಲ್ಲರೂ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಇ.ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Special Campaign to Cancel Fake GST Number ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಉಪಾಧ್ಯಕ್ಷ ಬಿ.ಗೋಪಿನಾಥ್, ಮಾಜಿ ಅಧ್ಯಕ್ಷ ಅಶ್ವತ್ಥ್ ನಾರಾಯಣ ಶೆಟ್ಟಿ, ಜಗದೀಶ್ ಮಾತನವರ್ ಮತ್ತಿತರರು ಉಪಸ್ಥಿತರಿದ್ದರು.