Kuvempu University Shivamogga ಕಾವ್ಯಕ್ಕೆ ಯಾವುದೇ ಮೈಲಿಗೆಯಿಲ್ಲ. ಮನಸ್ಸು ಹೃದಯಗಳನ್ನು ಮುಟ್ಟುವುದೇ ಅದರ ಗುರಿಯಾಗಿರಬೇಕು. ಬಿಚ್ಚು ಮನಸ್ಸಿನಿಂದ, ಸ್ವಚ್ಛ ಭಾವದಿಂದ ಬರೆದಾಗ ಜೀವತುಂಬುವ ಕಾವ್ಯ ಹುಟ್ಟಲು ಸಾಧ್ಯ ಎಂದು ಶಂಕರಘಟ್ಟದ ಕುವೆಂಪು ವಿದ್ಯಾವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಸಮೀಪದ ಶ್ರೀ ಮಾರ್ಖಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುವೆಂಪು ವಿದ್ಯಾವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯ ಕಮ್ಮಟ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡುತ್ತಿದ್ದರು.
ಯುವ ಬರಹಗಾರರಿಗೆ ಆಪ್ತವಾಗಿಯೂ, ಮುಕ್ತವಾಗಿಯೂ ಚಿಂತಿಸಿ ಕಾವ್ಯ ರಚನೆಗೆ ಇಳಿಯಬೇಕೆಂಬ ಸೂಚನೆ ನೀಡುವುದೇ ಕಾವ್ಯ ಕಮ್ಮಟದ ಉದ್ದೇಶ. ಸಾಹಿತ್ಯದ ಆಸಕ್ತಿ ಇರುವ ಯುವ ಮನಸ್ಸುಗಳು ಒಂದೆಡೆ ಕಲೆತು ಕಾವ್ಯದ ಒಳ-ಹೊರಗುಗಳ ಚರ್ಚೆ ಮಾಡಲು ಹುಟ್ಟಿಕೊಂಡಿದ್ದೆ ‘ಕಾವ್ಯ ಕಮ್ಮಟ’ ಎಂದು ವಿವರಿಸಿದರು.
ಪ್ರಸ್ತುತ ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆ ಆಗುತ್ತಿದೆ. ಹೊಸ ತಲೆಮಾರು ಕಾವ್ಯದಿಂದ ದೂರ ಸರಿಯುತ್ತಿದೆ ಎಂಬ ಕೂಗಿನ ನಡುವೆಯೂ ಕಾವ್ಯ ಕಮ್ಮಟ ಮೂಲಕ ಹೊಸ ಭರವಸೆ, ಹೊಸ ಬೆಳಕು ಕನ್ನಡ ಸಾಹಿತ್ಯಕ್ಕೆ ಗೋಚರಿಸುತ್ತಿದೆ ಎಂದರೆ ತಪ್ಪಾಗಲಾರದು. ಕಾವ್ಯ ಕಾಜಾಣ, ಕಥಾ ಕಮ್ಮಟ ಹೊಸ ತಲೆಮಾರಿನ ಬರಹಗಾರರು, ಕವಿಯತ್ರಿಯರು ಹುಟ್ಟಲು ಸಹಕಾರಿಯಾಗಿದೆ ಎಂದರು.
ಕನ್ನಡ ಭಾಷೆಯ ಬೆಳವಣಿಗೆಗಾಗಿ ಕುವೆಂಪು ಅವರು ಸಾಹಿತ್ಯದ ಮೂಲಕ ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ಪರಿಣಾಮ ಇಂದು ವಿಶ್ವದ ಅನೇಕ ಯೂವನಿರ್ಸಿಟಿಗಳಲ್ಲಿ ಕನ್ನಡಿಗರು ರಾರಾಜಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು’ ಸಾಲುಗಳನ್ನು ಮನದಟ್ಟು ಮಾಡಿಕೊಂಡಿರಬೇಕು ಎಂದರು.
ಖ್ಯಾತ ಚುಟುಕು ಕವಿ ಹೆಚ್.ಡುಂಡಿರಾಜ್ ಮಾತನಾಡಿ ಶಾಸ್ತ್ರಿಯವಾಗಿ ಸಾಹಿತ್ಯ ಓದದವರೂ ಕಮ್ಮಟದ ಭಾಗವಾಗಬಹುದು. ಇದರಿಂದ ಸೃಜನಶೀಲ ಬರಹಗಾರನೊಬ್ಬ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಭಿನ್ನ ವ್ಯಕ್ತಿತ್ವ, ಆಲೋಚನೆಗಳ ಪರಿಚಯವಾಗುತ್ತದೆ. ಹೊಸ ಗ್ರಹಿಕೆ, ಆಳವಾದ ವಿಚಾರಧಾರೆ ತೆರೆದುಕೊಳ್ಳಲು ಇಂತಹ ಕಮ್ಮಟಗಳು ನೆರವಾಗುವ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗಕ್ಕೆ ನಾಂದಿಯಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಕಥಾ ಕಮ್ಮಟದ ಸ್ಪೂರ್ತಿಯಿಂದ ರಾಜ್ಯಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಿ ಯುವಪ್ರತಿಭೆಗಳಿಗೆ ಅನಾವರಣ ಗೊಳಿಸಲು ಮುಂದಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಮಂದಿ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಮುಂದಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕಸಾಪವು ಸಂಘಟನೆಯ ಮೂಲಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕ, ಯುವತಿಯರಿಗೆ ಸಾಹಿತ್ಯದ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
Kuvempu University Shivamogga ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವಾಧ್ಯಕ್ಷ ಜಿ.ಬಿ.ಪವನ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇ ಖರ್, ಸಾಹಿತಿಗಳಾದ ನಾಗರಾಜ್‌ರಾವ್ ಕಲ್ಕಟ್ಟೆ, ಸವಿತಾ ನಾಗಭೂಷಣ್, ಶ್ರೀನಿವಾಸಮೂರ್ತಿ, ನಾಗರತ್ನ, ಸರೋಜಾ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.