ಇಂಧನದ ದರ ಇಳಿಮುಖ ವಾಗುತ್ತಿದ್ದಂತೆ, ತರಕಾರಿ ಬೆಲೆ ಕೂಡ ಕಡಿಮೆಯಾಗಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ನಿರಾಸೆ ಎದುರಾಗಿದೆ.
ಈ ಬಾರಿಯ ವರುಣನ ಆರ್ಭಟದಿಂದ ರೈತರ ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಲ್ಲದೆ, ತಾವು ಬೆಳೆದ ಎಲ್ಲಾ ತರಕಾರಿ, ಇತರೆ ಬೆಳೆಗಳು ನೀರುಪಾಲಾಗಿದೆ. ರೈತರು ಹೊಲದಲ್ಲಿ ಅಳಿದುಳಿದ ತರಕಾರಿಗಳನ್ನು ಮಾರುಕಟ್ಟೆಗೆ ತಂದರೂ ಸಹ , ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಅದೇ ತರಕಾರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರಿ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತರು ಹಾಗೂ ತರಕಾರಿ ಕೊಳ್ಳುವ ಗ್ರಾಹಕರಿಗೆ ಪ್ರಯೋಜನವಾಗುತ್ತಿಲ್ಲ.
‘ಕಳೆದ 15ದಿನಗಳಿಂದ ತರಕಾರಿ ದರ ಏರಿಕೆಯಾಗುತ್ತಲೇ ಇದೆ. ಗುಣಮಟ್ಟದಲ್ಲೂ ಕೊರತೆ ಇದೆ. ಹೀಗಾಗಿ, 1ಕೆಜಿ ಖರೀದಿಸುವ ಗ್ರಾಹಕರು ಅರ್ಧ ಕೆಜಿ ಕಾಲು ಕೆಜಿ ಖರೀದಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಟೊಮೋಟೊ ಕೆಜಿಗೆ 80 ರೂ. ಇತ್ತು. ಆದರೆ ಈಗ 65 ರೂಪಾಯಿಗಳಿಗೆ ಇಳಿದಿದೆ ಎಂದು ಶಿವಮೊಗ್ಗ ಪ್ರಮುಖ ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ತರಕಾರಿ ಬೆಲೆ ಗಗನಕ್ಕೇರಿರುವುದರಿಂದ ಜನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಸ್ಟಾಲ್, ಅಂಗಡಿಗಳಲ್ಲಿ ಮುಂಚಿನಂತೆ ತಾಜಾ ತರಕಾರಿಗಳು ದೊರೆಯುತ್ತಿಲ್ಲ.