Karnataka Assembly Election ಕಳೆದ ವಾರವಷ್ಟೇ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತ ಮತ್ತೆ ಜೆಡಿಎಸ್ ಗೆ ವಾಪಸಾದರು.
ಆಮ್ ಆದ್ಮಿ ಸೇರಿದ್ದ ಭಾಸ್ಕರ ರಾವ್ ಬಿಜೆಪಿ ಬಾವುಟ ಹಿಡಿದರು.
ಶೇ40 ಪ್ರಕರಣ ಆರೋಪಿ ಈಶ್ವರಪ್ಪ ಕ್ಲೀನ್ ಚಿಟ್ ಪಡೆದು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದರು. ಮಾಜಿ ಸಚಿವ ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರು ರಾಜಕೀಯ ವೈರಾಗ್ಯ ತಾಳಿದರು.
ಚಿಂಚನಸೂರ್ ಕಮಲ ಬಿಟ್ಟು ಕೈ ಹಿಡಿದರು.
ಇಷ್ಟೆಲ್ಲಾ ನಡೆಯುವಾಗ ಎಲ್ಲಾ ಪಕ್ಷಗಳೂ ಇನ್ನೂ ತಮ್ಮ ಚುನಾವಣಾ ಹುರಿಯಾಳುಗಳ ಪೂರ್ಣಪಟ್ಟಿ ಬಿಡುಗಡೆ ಮಾಡಿಲ್ಲ. ಎಲ್ಲವಕ್ಕೂ ಅನ್ಯ ಪಕ್ಷಗಳ ಘಟ್ಟಿ ನಾಯಕ ರಾಜಿನಾಮೆ ನೀಡಿ ತಮ್ಮ ಪಕ್ಷಕ್ಕೆ ಬರಬಹುದೆಂಬ ನಿರೀಕ್ಷೆಗಳನ್ನ ಗುಪ್ಪೆ ಹಾಕಿಕೊಂಡಿವೆ.
Karnataka Assembly Election ಟಿಕೇಟು ಸಿಗಬಹುದು ಆದರೆ ಜನ ಮೂಢರಲ್ಲ. ಇವತ್ತು ಪಕ್ಷಬಿಟ್ಟು ಪಕ್ಷ ಸೇರುವವರ ಬಗ್ಗೆ ಇಡೀಯಾಗಿ ಅಳೆಯುತ್ತಾರೆ. ಮುಂಚೆ ಪಕ್ಷವನ್ನ ನೋಡಿ ಮತ ನೀಡುವ ಕಾಲವಿತ್ತು.ಕತ್ತೆಯಾದರೂ ನಿಂತೆ ಪಕ್ಷದ ಜನಪ್ರಿಯತೆಯಿಂದ ಗೆದ್ದು ಬಿಡುತ್ತೆ ಎಂಬ ಅಂಬೋಣವಿತ್ತು.
ಅದೆಲ್ಲವೂ ಮುಗಿದುಹೋಗಿದೆ. ಕೇವಲ ಅಧಿಕಾರ,ಸ್ಥಾನಮಾನ, ಹಣಕ್ಕಾಗಿ ಹಪಹಪಿಸುವವರ ಬಗ್ಗೆ ಜನಕ್ಕೆ ಹೇಸಿಗೆ ಬಂದಿದೆ. ತಮ್ಮ ಕಾರ್ಯಕ್ಷಮತೆ, ಪ್ರಾಮಾಣಿಕತೆ ,
ಜನಹಿತ ಇವುಗಳ ಬಗ್ಗೆ ಸಂಕಲ್ಪವುಳ್ಳವರನ್ನ ಗುರುತಿಸುತ್ತಾರೆ.
ಈಗ ಪಕ್ಷಗಳು ಬಂದ ಬಂದವರಿಗೆ ಬಲೆಬೀಸಿ ಬೇಟೆಯಾಡಬಹುದು.ಮತಪೆಟ್ಟಿಗೆಯ ಪ್ರಭು ಅಂಥವರ ಬಂಡವಾಳ ಅರಿತಿರುತ್ತಾನೆ ಎಂಬುದನ್ನ ಎಲ್ಲಾ ಪಕ್ಷಗಳೂ ಈಗ ತಿಳಿಯಬೇಕಾದ ನಿಷ್ಠುರ ಸತ್ಯ.