Karnataka Legal Services Authority ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು ವಿಚಾರಣೆಗೆ ಬರುವ ಮುನ್ನವೇ ರಾಜೀಸಂದಾನದ ಮೂಲಕ ಇತ್ಯರ್ಥಗೊಳಿಸಿ, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸುವುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹೈಕೋರ್ಟ್ನ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಹೇಳಿದರು.
ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಪೀಪಲ್ ಲಾಯರ್ಸ್ ಗಿಲ್ಡ್ ಮತ್ತು ಎಸ್.ಎಸ್.ಎಸ್.ಎಂ.ಎಸ್. ಸ್ವಯಂ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು – ನೆರವು ಮಹಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
Karnataka Legal Services Authority ರಾಜ್ಯದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಕೊಠಡಿಯನ್ನು ಆರಂಭಿಸಲಾಗಿರುವುದು ಸಂತಸದ ಸಂಗತಿ. ಲಿಂಗತ್ವ ಅಲ್ಪಸಂಖ್ಯಾತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಸವಾಲುಗಳು ಅನೇಕ. ಸಂವಿಧಾನದ ಆಶಯದಂತೆ ಅವರಿಗೂ ಸಮಾನವಾದ ಹಕ್ಕು ಮತ್ತು ಅವಕಾಶಗಳನ್ನು ಒದಗಿಸಲಾಗಿದೆ. ಆದರೂ ಇನ್ನಷ್ಟು ಸೇವಾ -ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.
ಭಾರತೀಯ ಸೈನ್ಯದಲ್ಲೂ ಲಿಂಗತ್ವ ಅಲ್ಪಸಂಖ್ಯಾತರು ಸೇವೆ ಸಲ್ಲಿಸುವಂತಾಗಬೇಕು.ಭ್ರಷ್ಟಾಚಾರ ನಾಗರೀಕ ಸಮಾಜದ ಕಳಂಕ. ಅದು ಕ್ಯಾನ್ಸರ್ ಇದ್ದಂತೆ. ಮನೆಯಲ್ಲಿನ ಪ್ರತಿ ಮಹಿಳೆಯರು ಮನೆಯ ಯಜಮಾನ ತರುವ ಹಣ ನ್ಯಾಯದ ಸಂಪಾದನೆಯೇ ಎಂದು ಪ್ರಶ್ನಿಸುವಂತಾಗಬೇಕು. ತಪ್ಪಿದಲ್ಲಿ ಅದು ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಂತೆ ಎಂದ ಅವರು ಈ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಸಂಕಲ್ಪ ಮಾಡುವಂತೆ ಸೂಚಿಸಿದರು.
ಇತ್ತೀಚೆಗೆ ನೀಡಿದ ಒಂದು ಮಹತ್ವದ ತೀರ್ಪಿನಿಂದ ಸಾರಿಗೆ ನಿಯಮಗಳ ಅನುಷ್ಟಾನದಲ್ಲಿ ಅಲ್ಪ ಸಡಿಲಿಕೆ ಮಾಡಿದ್ದರಿಂದಾಗಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬಂದಿದೆ ಎಂದರು.
ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರತಿ ವ್ಯಕ್ತಿಯೂ ಮಾನವೀಯ ನೆಲೆಯಲ್ಲಿಲ ಜೀವನ ನಿರ್ವಹಣೆ ಮಾಡಬೇಕು. ಮಕ್ಕಳು ತಮ್ಮ ಪೋಷಕರನ್ನು ನಿರ್ಲಕ್ಷಿಸುವುದು ಸಲ್ಲದು ಎಂದರು.
ಸಾಧ್ಯವಿರುವಲ್ಲಿ ಮರ-ಗಿಡಗಳನ್ನು ಬೆಳೆಸಿ, ಸ್ವಚ್ಚ, ಸ್ವಸ್ಥ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಶಿಕ್ಷಣ ಉತ್ತಮ ಬದುಕಿನ ಬ್ರಹ್ಮಾಸ್ತ್ರಿ ಶಿಕ್ಷಿತರ ಜೀವನ ಸುಖಮಯವಾಗಿರಲಿದೆ. ವ್ಯಕ್ತಿಗೆ ವಿದ್ಯೆಯೊಂದಿಗೆ ವಿನಮ್ರತೆಯೂ ಭೂಷಣ ತರಲಿದೆ. ಅಶಿಕ್ಷಿತ ಹೆಚ್ಚು ಸಂಕಷ್ಟಕ್ಕೊಳಗಾಗುತ್ತಾನೆ. ಶಿಕ್ಷಣ ಎಲ್ಲರ ಬಲಿಷ್ಟ ಅಸ್ತ್ರವಾಗಿದೆ. ಅದರಲ್ಲೂ ಕೆಲವು ಸಾಮಾಜಿಕ ಹೊಣೆಗಾರಿಕೆ ಮರೆತ ವಿದ್ಯಾವಂತರಿಂದಲೇ ಮೋಸ-ವಂಚನೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿ ಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ , ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಎಸ್.ಎಸ್.ಎಸ್.ಎಂ.ಎಸ್.ಸಂಸ್ಥೆಯ ನಿರ್ದೇಶಕ ಫಾ|| ಕ್ಲಿಫೋರ್ಡ್ ರೋಷನ್ ಪಿಂಟೋ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಲಿಂಗತ್ವ ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ರಂಗಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಉತ್ಪಾದಿಸುತ್ತಿರುವ ಉತ್ಪನ್ನಗಳು, ಸರ್ಕಾರದ ವಿವಿಧ ಇಲಾಖಾ ಯೋಜನೆಗಳ ಕುರಿತು ಮಾಹಿತಿ ಒದಗಿಸುವ ಸ್ಟಾಲ್‌ಗಳನ್ನು ಹೈಕೋರ್ಟ್ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಗಣ್ಯರೊಂದಿಗೆ ವೀಕ್ಷಿಸಿ, ಮಾಹಿತಿ ಪಡೆದರು.