Voters Awareness ಚುನಾವಣೆ ಎಂದರೆ ಮತದಾರ ಪ್ರಭು ನೆನಪಿಗೆ ಬರುತ್ತಾನೆ.
ಜೊತೆಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಯತ್ನಗಳು ನಡೆಯುತ್ತವೆ. ಹಾಗೆಯೇ ವಿವಿಧ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿಗಳಿಂದ ತಮಗೆ ಟಿಕೆಟ್ ದೊರೆಯದೇ ಇದ್ದಾಗ ಪಕ್ಷಾಂತರ ಚಟುವಟಿಕೆ ಬಿರುಸಾಗಿ ನಡೆಯಲಾರಂಭಿಸುತ್ತದೆ.
ರಾಜಕೀಯ ಇತಿಹಾಸದಲ್ಲಿ ಇದು ಸಾಮಾನ್ಯ. ಶಿವಮೊಗ್ಗದ ಬಿಜೆಪಿ ಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ಗುಡುಗಿ ಸುದ್ದಿ ಮಾಡಿದ್ದಾರೆ.
ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾ ಬಿಜೆಪಿ ಹೈಕಮಾಂಡ್ ಪತ್ರ ಬರೆದಿದೆಯಂತೆ. ಏನಾದರಾಗಲೀ ತಾವು ಟಿಕೆಟ್ ಆಕಾಂಕ್ಷಿ ಎಂದು ಮಂಜುನಾಥ್ ಘಂಟಾಘೋಷ ಹೇಳಿದ್ದಾರೆ.
ಈ ನಡುವೆ ಸಾಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ರಾಜನಂದಿನಿ ಅವರು ದಿಢೀರನೆ ಬಿಜೆಪಿ ಸೇರ್ಪಡೆಯಾಗಿರುವುದು ಹಿರಿಯ ಕಾಂಗ್ರೆಸ್ಸಿಗ ಕಾಗೋಡು ತಿಮ್ಮಪ್ಪ ಅವರಿಗೆ ಇರಿಸುಮುರಿಸಾಗಿದೆ.
ಮಗಳೇ ಹಾಗೆ ನಡೆದುಕೊಂಡಿದ್ದಾಳೆ ತಮಗದು ಅನಿರೀಕ್ಷಿತ ಸುದ್ದಿ ಎಂದು ಬೆಚ್ಚಿಬಿದ್ದಂತೆ ಹೇಳಿದ್ದಾರೆ.
Voters Awareness ರಾಜ್ಯ ಕಾಂಗ್ರೆಸ್ ಫ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಅವರು ಡಾ.ರಾಜನಂದಿನಿ ಬಿಜೆಪಿಕಡೆಗೆ ಹೋಗಿದ್ದು ಪಕ್ಷಕ್ಕೆ ಏನೂ ನಷ್ಟವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯಾವ ಪಕ್ಷವೇ ಆಗಲಿ ಈ ಪಕ್ಷಾಂತರ ಪರ್ವದ ಬಗ್ಗೆ ಹೇಳುವ ಸಾಮಾನ್ಯ ಮಾತು.
ಇದೇ ರೀತಿ ಜೆಡಿಎಸ್ ದತ್ತ, ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಮುಂತಾದವರನ್ನ ಕಳೆದು ಕೊಂಡು ಸೊರಗುವಂತೆ ಕಂಡಿತ್ತು. ಮತ್ತೆ ದೇವೇಗೌಡರ ಕೌಶಲ ರಾಯಭಾರಿಗಳಿಂದ ದತ್ತ ರನ್ನು ತೆನೆ ಗುರುತಿನಡಿ ಸ್ಪರ್ಧಿಸಲು ಘೋಷಣೆ ಮಾಡಲಾಗಿದೆ.
ಈಗ ಲಕ್ಷ್ಮಣ ಸವದಿ ಅವರೂ ಅಷ್ಟೆ ಪಕ್ಷ ಅವರಿಗೆ ಶಾಸಕ ಸ್ಥಾನವಿಲ್ಲದಾಗ ಉಪಮುಖ್ಯ ಮಂತ್ರಿ ಸ್ಥಾನ ನೀಡಿ ,ಎಂಎಲ್ ಸಿ ಮಾಡಿತ್ತು. ಸಚಿವರೂ ಆಗಿದ್ದರು.
ಆಯನೂರು ಮಂಜುನಾಥ್ ಮತ್ತು ಸವದಿ ಈಗ ಜನರೆದುರು ಒಂದೇ ತಕ್ಕಡಿಯಲ್ಲಿದ್ದಾರೆ ಅನಿಸುತ್ತದೆ. ಇವರೆಲ್ಲರಿಗೂ ಜಾಗೃತ ಮತದಾರ ಪ್ರಭುವೇ ಬುದ್ಧಿ ಕಲಿಸಬೇಕು.