Scouts and Guides ಮಕ್ಕಳು ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು, ಸೃಜನಶೀಲ ಶಕ್ತಿ ವೃದ್ದಿಸುವುದು ಹಾಗೂ ಮಕ್ಕಳಲ್ಲಿ ಉತ್ತಮ ಆಲೋಚನೆ ಮೂಡಿಸುವುದು ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ಉದ್ದೇಶ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.
ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಪೋಷಕರು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಅರಿವು ಮೂಡಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ತರಬೇತಿ ಪಡೆಯುವಂತೆ ಪ್ರೇರಣೆ ನೀಡಬೇಕು. ಇದರಿಂದ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.
Scouts and Guides ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ವೀರೇಶಪ್ಪ ಅವರ ಜಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ 70ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿಶೇಷ ಆಹಾರಗಳನ್ನು ತಯಾರಿಸಿ ಎಲ್ಲರೂ ಸೇವಿಸಿದರು.
ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಅವರು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮೀನಾಕ್ಷಮ್ಮ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ರಾಘವೇಂದ್ರ, ವೀರೇಶಪ್ಪ, ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್, ಸಹಾಯಕ ಜಿಲ್ಲಾ ಆಯುಕ್ತ ಶ್ರೀನಿವಾಸ್, ಮಲ್ಲಿಕಾರ್ಜುನ ಕಾನೂನು ಉಪಸ್ಥಿತರಿದ್ದರು.