Women Empowerment ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಯಶಸ್ಸು ಸಾಧಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುವ ಜತೆಯಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಅಶೋಕ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥೆ ಡಾ. ಸೋನಿಯಾ ಅಮಿತ್‌ಕುಮಾರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಸ್ಕೌಟ್ ಭವನದಲ್ಲಿ ಅಶೋಕ ಸಂಜೀವಿನಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ, ಕಲೆ, ಕ್ರೀಡೆ, ಆಧ್ಯಾತ್ಮ, ತಾಂತ್ರಿಕ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.
women empowerment ಜಿಲ್ಲಾ ಮುಖ್ಯ ಆಯುಕ್ತ ಹೆಚ್.ಡಿ.ರಮೇಶಶಾಸ್ತ್ರೀ ಮಾತನಾಡಿ, ಇತಿಹಾಸದಲ್ಲಿ ಸಾವಿರಾರು ಮಹಿಳಾ ಸಾಧಕರಿದ್ದು, ಮಹಿಳೆಯರ ಯಶಸ್ವಿ ಜೀವನಗಾಥೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ಷೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಒಂದು ವಾಕ್ಯ ಅರ್ಥಪೂರ್ಣವಾಗಲು ಪದಗಳು ಎಷ್ಟು ಮುಖ್ಯವೋ, ಲೇಖನಾ ಚಿಹ್ನೆಗಳು ಅಷ್ಟೇ ಮುಖ್ಯ. ಪುರುಷರು ಪದಗಳಾದರೆ, ಮಹಿಳೆಯರು ಲೇಖನ ಚಿಹ್ನೆಯಂತೆ. ನಮ್ಮ ಜೀವನ ಅರ್ಥಪೂರ್ಣವಾಗಬೇಕಾದರೆ ಪುರುಷರು ಸ್ತ್ರೀಯರು ಸಮಾನರಂತೆ ಕಾಣಬೇಕು ಎಂದು ಹೇಳಿದರು.
ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ತ್ರೀಪುರುಷ ಸಮಾನತೆಯ ಕುರಿತು ಹೆಚ್ಚಿನ ಗಮನ ಕೊಡಬೇಕು. ಮಹಿಳೆಯರ ರಕ್ಷಣೆ ಅತ್ಯವಶ್ಯಕ, ಕಾನೂನು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಅವಶ್ಯಕ. ಹೆಣ್ಣು ಮಕ್ಕಳು ದೌರ್ಜನ್ಯ ಮುಕ್ತವಾಗಬೇಕು. ಅರಿವಿನ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅನಿವಾರ್ಯ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಡಾ. ಸೋನಿಯಾ ಅಮಿತ್ ಕುಮಾರ ಅವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ ಮಾತನಾಡಿದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ್‌ಎಲ್.ಟಿ ನಿರೂಪಣೆ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀ ರಾವಿ, ಹೇಮಲತಾ, ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಪಿ.ಆರ್.ಒ ವಿಜಯಕುಮಾರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎ.ವಿ.ರಾಜೇಶ, ನವಸಂಜೀವಿನಿ, ಅಶೋಕ ಸಂಜೀವಿನಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.