Respect for Gender minorities ಕುಟುಂಬ ಮತ್ತು ಸಮಾಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ರಕ್ಷ ಸಮುದಾಯ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಿ.ಆರ್.ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಸ್ವೀಪ್-ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಒಂದು ಅಂಗವಿಕಲ ಮಗು ಹುಟ್ಟಿದರೆ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅದೇ ಟ್ರಾನ್ಸ್‍ಜೆಂಡರ್ ಎಂದು ತಿಳಿದಾಗ ತುಚ್ಚವಾಗಿ ಕಾಣಲು ಆರಂಭಿಸುತ್ತೇವೆ. ಈ ನಮ್ಮ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದನ್ನು ಲಿಂಗದಿಂದ ತುಲನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿತ್ವದಿಂದ ಅಥವಾ ಆತ್ಮದಿಂದ ವ್ಯಕ್ತಿಯನ್ನು ತುಲನೆ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ಲಿಂಗತ್ವ ಅಲ್ಪಸಂಖ್ಯಾತರನ್ನು ತುಚ್ಚವಾಗಿ ಕಂಡು ಕಡೆಗಣಿಸಬಾರದು ಎಂದರು.
ಕುಟುಂಬ ಅಂತಹ ವ್ಯಕ್ತಿಯನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಹಾಗೆ ಕಂಡಿದ್ದರೆ ಈ ರೀತಿ ತಮ್ಮ ಹಕ್ಕಿಗಾಗಿ ಹೋರಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಕುಟುಂಬ ಮತ್ತು ಸಮಾಜ ಗೌರವದಿಂದ ಕಂಡು ಸ್ವೀಕರಿಸುತನಕ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ.
ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ನೀಡಿದೆ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಸಂವಿಧಾನದ 21 ವಿಧಿ ನಮ್ಮೆಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಹಕ್ಕು ಮತ್ತು ಬಾಧ್ಯತೆಗಳನ್ನು ಅರ್ಥೈಸಿಕೊಂಡು ನಾವೆಲ್ಲರೂ ಒಂದು ಎಂಬ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ. ಸಮಾಜ ನಮಗೆ ಒಂದು ಗುರುತನ್ನು ನೀಡಿಲ್ಲ. ಗುರುತಿಸುವಿಕೆ ಕೊರತೆ ಇದೆ.
ನಮ್ಮನ್ನು ಯಾರೂ ಆಳವಾಗಿ ತಿಳಿಯಲು ಪ್ರಯತ್ನಿಸಿಲ್ಲ. ಸರ್ಕಾರ ಪ್ರಾಣಿಗಳ ಸರ್ವೇ ಸಹ ಮಾಡಿದೆ. ಆದರೆ ನಮ್ಮ ಬಗ್ಗೆ ಸರ್ವೇ ಆಗಿಲ್ಲ. 2004 ರಲ್ಲಿ ಹೆಚ್‍ಐವಿ ಅನುದಾನ ಬರುವವರೆಗೆ ನಮ್ಮ ಬಗ್ಗೆ ಹೆಚ್ಚಾಗಿ ತಿಳಿದೇ ಇರಲಿಲ್ಲ. ಹೆಚ್‍ಐವಿ ನಮ್ಮಿಂದ ಹರಡಬಾರದು ಎಂಬ ಉದ್ದೇಶದಿಂದ ಆ ಕಾರ್ಯಕ್ರಮದ ಅಂಗವಾಗಿ ನಮ್ಮ ಮ್ಯಾಪಿಂಗ್ ಶುರು ಆಯಿತು. ಆಗಲೂ ಸಹ ಗುರುತಿಸಿಕೊಂಡವರು ತೀರಾ ಕಡಿಮೆ. ಗುರುತಿಸುವಿಕೆ ಬಹಳ ಪ್ರಮುಖವಾಗುತ್ತದೆ. ನಮ್ಮಲ್ಲಿ ಅನೇಕ ವಿಧಗಳ ಜನರಿದ್ದಾರೆ. ಅವರ ಸರ್ವೇ ಆಗಿಲ್ಲ. ಗುರುತಿಸುವಿಕೆಯ ಆಧಾರದ ಮೇಲೆ ನಮಗೆ ಆಧಾರ್, ಇತರೆ ಗುರುತಿನ ಚೀಟಿಗಳು ಲಭ್ಯವಾಗುತ್ತಿಲ್ಲ. ಹಲವರು ಗಂಡು, ಹೆಣ್ಣು ಮತ್ತು ಕೆಲವರು ಟ್ರಾನ್ಸ್‍ಜೆಂಡರ್ ಎಂದು ಗುರುತಿಸಿಕೊಳ್ಳುತ್ತಾರೆ.
ಕುಟುಂಬದವರೇ ಆಗಲೀ ಅಥವಾ ಸಮಾಜ ನಮ್ಮನ್ನು ಪ್ರಾಣಿಗಿಂತ ಕೀಳಾಗಿ ಕಾಣುತ್ತಾರೆ. ಹೊರಗಿನ ದೇಹವನ್ನು ಮಾತ್ರ ನೋಡುತ್ತಾರೆ. ಮಾನಸಿಕವಾಗಿ ಕುಗ್ಗಿರುವುದು ಅವರಿಗೆ ಕಾಣುವುದಿಲ್ಲ. ಅನೇಕರು ಖಿನ್ನತೆ ಮತ್ತಿತರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಮ್ಮ ಬಗ್ಗೆ ಸಮಾಜದಲ್ಲಿ ಯಾವ ರೀತಿಯಲ್ಲೂ ಅರಿವು ಮೂಡಿಸಲಾಗಿಲ್ಲ. ಪಠ್ಯ ಇತರೆ ಎಲ್ಲೂ ನಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗೇ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಲಿಲ್ಲ. 1999 ರಲ್ಲಿ ಎನ್‍ಜಿಓ ಮೂಲಕ ಮಾನವ ಹಕ್ಕುಗಳ ಬಗ್ಗೆ ತಿಳಿದು, ನಾವೂ ಮನುಷ್ಯರು, ನಮಗೂ ಧ್ವನಿ ಇದೆ ಎಂದು ತಿಳಿಯಲಾರಂಭಿಸಿದೆವು.
ಹೆಚ್‍ಐವಿ ಕಾರ್ಯಕ್ರಮದ ಪ್ರಕಾರ ರಾಜ್ಯದಲ್ಲಿ 36 ಸಾವಿರ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆಂಬ ಮಾಹಿತಿ ಇದೆ. ಇದು ಕೂಡ ನಿಖರ ಮಾಹಿತಿ ಅಲ್ಲ. ನಮ್ಮ ಬಗ್ಗೆ ಸರ್ವೇ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕಿದ್ದರ ಫಲವಾಗಿ ಮೊದಲ ಹಂತದಲ್ಲಿ ಪೈಲಟ್ ಪ್ರೋಗ್ರಾಂ ಆಗಿ ಮೈಸೂರು ಮತ್ತು ಬಿಜಾಪುರದಲ್ಲಿ ಸರ್ವೇ ಶುರು ಆಗಿದ್ದು ರೂ.75 ಲಕ್ಷ ಬಿಡುಗಡೆ ಆಗಿದೆ. ನಾವು ಘನತೆ ಮತ್ತು ಗೌರವದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ವಾಸಕ್ಕೆ ಮನೆ ಬೇಕು. ನಾವು ಒಂದೆಡೆ ನೆಲೆ ನಿಂತರೆ ನಮಗೂ ಒಂದು ವಿಳಾಸ ಪುರಾವೆ ದೊರೆತು ಸೌಭ್ಯಗಳನ್ನು ಪಡೆಯಲು ಪೂರಕ ದಾಖಲೆಗಳು ಒದಗುತ್ತವೆ. ಆದ್ದರಿಂದ ನಾವು ವಾಸಿಸಲು ನಿವೇಶನ ನೀಡಬೇಕು. ಒಂದೆಡೆ ಸೇರಿ ನಮ್ಮ ಬಗ್ಗೆ ನಾವೇ ಚರ್ಚಿಸಲು ಒಂದು ಜಾಗ ನೀಡಬೇಕೆಂದು ಮನವಿ ಮಾಡಿದ ಅವರು ನಮ್ಮನ್ನು ಒಪ್ಪಿಕೊಂಡು ಶಿಕ್ಷಣ ಮುಂದುವರೆಸಲು ಬಿಟ್ಟರೆ ನಾವು ಸಾಧನೆ ಮಾಡುತ್ತೇವೆ. ಈ ವರ್ಷ 4 ಜನ ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. ಒಟ್ಟಾಗಿ ಸೇರಿ ಕೆಲಸ ಮಾಡಿದಲ್ಲಿ ಮುಂದೊಂದು ದಿನ ಭಿಕ್ಷಾಟನೆ, ಲೈಂಗಿಕ ಕೆಲಸ ಬಿಟ್ಟು ಸಮಾಜದ ಬದಲಾವಣೆ ಪ್ರಕ್ರಿಯೆಯಲ್ಲಿ ಪಾಲುದಾರರಾಗುತ್ತೇವೆ ಎಂದರು.
ಅಧ್ಯಕ್ಷತೆ ವಹಿಸದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಯಾರಾದರೂ ಒತ್ತಡ ಹೇರಿ, ಬೆದರಿಕೆ ಹಾಕಿ ನೀವು ಹೆಣ್ಣು ಅಥವಾ ಗಂಡೇ ಎಂದು ಗುರುತಿಸಿಕೊಳ್ಳಬೇಕು ಎಂದಾಗಲೀ ಅಥವಾ ಇನ್ನಿತರ ರೀತಿ ಬೆದರಿಕೆ ಹಾಕಿದರೆ ಜಿಲ್ಲಾಡಳಿತಕ್ಕೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
18 ವರ್ಷ ತುಂಬಿದ ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ಪ್ರತಿ ಲಿಂಗತ್ವ ಅಲ್ಪಸಂಖ್ಯಾತರು ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ. ಸಕ್ರಿಯವಾಗಿ ಎಲ್ಲ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಈಗ ಯಾರದ್ದಾದರೂ ಗುರುತಿನ ಚೀಟಿ ಆಗಿಲ್ಲದಿದ್ದರೆ ಈಗಲೇ ತಿಳಿಸಿ, ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು.
ಸಮುದಾಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಈ ಸಮುದಾಯದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಇನ್ನಷ್ಟು ಆಗಬೇಕು. ಮುಂಬರುವ ದಿನಗಳಲ್ಲಿ ನಿಮ್ಮ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಹಾಕಿಕೊಳ್ಳಲಾಗುವುದು ಎಂದರು.
Respect for Gender minorities ಪೊಲೀಸ್ ಅಧೀಕ್ಷಕ ಸುರೇಶ್ ಎಂ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಸ್ವಾಗತಿಸಿದರು. ಕರ್ನಾಟಕ ರಾಜ್ಯಮಟ್ಟದ ವಿಶಿಷ್ಟ ಲೈಂಗಿಕತೆ ಸಂಘಟನೆಯ ಒಕ್ಕೂಟ ‘ಸಾರಥ್ಯ’ ದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.